ಹಿಂದು ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ: Dyspಗೆ ಕಡ್ಡಾಯ ರಜೆ, ಮತ್ತಿಬ್ಬರು ಅಮಾನತು!

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿತರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ಡಿವೈಎಸ್ ಪಿಗೆ ಕಡ್ಡಾಯ ರಜೆ ಹಾಗೂ ಇಬ್ಬರನ್ನು ಅಮಾನತು ಮಾಡಲಾಗಿದೆ. 

ಪ್ರಕರಣ ಸಂಬಂಧ ಪುತ್ತೂರು ಗ್ರಾಮಾಂತರ ಸಬ್‌ ಇನ್ಸ್‌ಪೆಕ್ಟರ್ ಶ್ರೀನಾಥ ರೆಡ್ಡಿ ಹಾಗೂ ನಗರ ಠಾಣೆ ಕಾನ್ಸ್‌ಟೇಬಲ್‌ನನ್ನು ಅಮಾನತು ಮಾಡಲಾಗಿದೆ. ಮೇಲಧಿಕಾರಿಗಳಿಗೆ ಡಿವೈಎಸ್‌ಪಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದ್ದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ವೀರಯ್ಯ ಹಿರೇಮಠ್ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತ ಅವಿನಾಶ್ ದೂರಿನ ಹಿನ್ನೆಲೆ ಎಫ್‌ಐಆರ್ ದಾಖಲಾಗಿದೆ.

ಕಟೀಲ್ ಹಾಗೂ ಸದಾನಂದಗೌಡ ಭಾವಚಿತ್ರವಿರುವ ಬ್ಯಾನರ್'ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇವರ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಾರೆಂದು ಹೇಳಲಾಗುತ್ತಿದೆ. ಆರೋಪಿಗಳ ದೇಹದ ಮೇಲೆ ಮೂಗೇಟು ಬಿದ್ದಿರುವುದು, ರಕ್ತ ಹೆಪ್ಪುಗಟ್ಟಿರುವುದು, ಅತೀವ್ರ ಗಾಯಗಳಾಗಿರುವುದು ಕಂಡು ಬಂದಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ವಿಕ್ರಮ್ ಆಮ್ಟೆ ಅವರು ಈ ಸಂಬಂಧ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ಘಟನೆ ಬಗ್ಗೆ ಎಸ್'ಪಿ ವಿವರ ನೀಡಲು ನಿರಾಕರಿಸಿದ್ದು, ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಪುತ್ತೂರು ಬಸ್ ನಿಲ್ದಾಣದ ಬಳಿ ಕಟೀಲ್ ಹಾಗೂ ಸದಾನಂದಗೌಡ ಅವರ ಭಾವಚಿತ್ರ ಇರುವ ಬ್ಯಾನರ್'ಗೆ ಚಪ್ಪಲಿ ಹಾರಹಾಕಿರುವುದು ಪತ್ತೆಯಾಗಿತ್ತು. ಬಳಿಕ ಸ್ಥಳೀಯ ಆಡಳಿತ ಮಂಡಳಿ ಬ್ಯಾನರಲ್'ನ್ನು ತೆರವುಗೊಳಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ನರಿಮೊಗ್ರು ನಿವಾಸಿಗಳಾದ ಅಭಿ ಅಲಿಯಾಸ್ ಅವಿನಾಶ್, ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್, ವಿಶ್ವನಾಥ್ ಮತ್ತು ಮಾಧವ ಎಂಬ ಒಟ್ಟು 9 ಮಂದಿಯನ್ನು ಪುತ್ತೂರು ಪೇಟೆ ಪೊಲೀಸರು ಸೋಮವಾರ ಮತ್ತು ಮಂಗಳವಾರ ಬಂಧನಕ್ಕೊಳಪಡಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com