ಎಸ್‌ಸಿ ಒಳ ಮೀಸಲಾತಿ ಪ್ರಶ್ನಿಸಿ ಪಿಐಎಲ್: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

ನಿರ್ಗಮಿತ ಬಿಜೆಪಿ ಸರ್ಕಾರ ಅವಕಾಶ ವಂಚಿತ ಪರಿಶಿಷ್ಟ ಜಾತಿ(ಎಸ್ ಸಿ) ಸಮುದಾಯಕ್ಕೆ ನೀಡಿದ್ದ ಒಳ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ನಿರ್ಗಮಿತ ಬಿಜೆಪಿ ಸರ್ಕಾರ ಅವಕಾಶ ವಂಚಿತ ಪರಿಶಿಷ್ಟ ಜಾತಿ(ಎಸ್ ಸಿ) ಸಮುದಾಯಕ್ಕೆ ನೀಡಿದ್ದ ಒಳ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ, ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿದೆ.

ಬೆಂಗಳೂರಿನ ನಿವಾಸಿ ಹಾಗೂ 'ಮೀಸಲತಿ ಸಂರಕ್ಷಣಾ ಒಕ್ಕೂಟ'ದ ಅಧ್ಯಕ್ಷ ಎಚ್.ರವಿ ಅವರು ಒಳ ಮೀಸಲಾತಿ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ನಿರ್ಗಮಿತ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅಧ್ಯಕ್ಷತೆಯ ಸಂಪುಟ ಉಪಸಮಿತಿಯು 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿದೆ ಮತ್ತು ಎಸ್‌ಸಿ ನೀಡಲಾಗುವ ಶೇ. 17 ರಷ್ಟು ಮೀಸಲಾತಿಯನ್ನು ಈ ನಾಲ್ಕು ಗುಂಪುಗಳಿಗೆ ವಿತರಿಸಲು ಶಿಫಾರಸು ಮಾಡಿತ್ತು.

ಸಂಪುಟ ಉಪಸಮಿತಿಯ ಶಿಫಾರಸನ್ನು ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಕಳೆದ ಮಾರ್ಚ್ 27ರಂದು ಅಂಗೀಕರಿಸಿತ್ತು.

ಗುಂಪು ಒಂದರಲ್ಲಿ ಆದಿಜಾಂಬವ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ, ಗುಂಪು 2 ರಲ್ಲಿ ಆದಿಕರ್ನಾಟಕ ಸಮುದಾಯಕ್ಕೆ ಶೇ 5.5ರಷ್ಟು ಮೀಸಲಾತಿ, ಗುಂಪು 3ರಲ್ಲಿ ಬಂಜಾರ, ಬೋವಿ, ಕೊರಚರಿಗೆ ಶೇ 4.5ರಷ್ಟು ಮೀಸಲಾತಿ, ಗುಂಪು 4ರಲ್ಲಿರುವ ಮತ್ತಿತರರಿಗೆ ಶೇ.1ರಷ್ಟು ಮೀಸಲಾತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

"ಸಚಿವ ಸಂಪುಟ ಉಪ ಸಮಿತಿಯ ವರದಿಯ ಪ್ರತಿಯು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿಲ್ಲ. ಹೀಗಾಗಿ ಗೌರವಾನ್ವಿತ ನ್ಯಾಯಾಲಯದ ಮುಂದೆ ಅದನ್ನು ಸಲ್ಲಿಸಲು ತಮಗೆ ಸಾಧ್ಯವಾಗಿಲ್ಲ" ಎಂದು ಅರ್ಜಿದಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com