ಸಿದ್ದರಾಮಯ್ಯ-ಡಿಕೆ.ಶಿವಕುಮಾರ್ ಜೊತೆಗೆ 12ಕ್ಕೂ ಹೆಚ್ಚು ಸಚಿವರ ಪ್ರಮಾಣವಚನ?

ಸಾಕಷ್ಟು ಹಗ್ಗಜಗ್ಗಾಟದ ಬಳಿಕ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಆರಂಭಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾಕಷ್ಟು ಹಗ್ಗಜಗ್ಗಾಟದ ಬಳಿಕ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಆರಂಭಗೊಂಡಿದೆ.

ಮೇ.20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇವರಿಬ್ಬರಷ್ಟೇ ಅಲ್ಲದೆ ಸಿಎಂ ಹಾಗೂ ಡಿಸಿಎಂ ಜೊತೆಗೆ 12ಕ್ಕೂ ಹೆಚ್ಚು ಮಂದಿ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರಂದು ಹೇಳಲಾಗುತ್ತಿದೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಡಿಕೆ.ಶಿವಕುಮಾರ್ ಅವರು, ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಶುಕ್ರವಾರ ಬೆಳಿಗ್ಗೆ ಮತ್ತೆ ದೆಹಲಿಗೆ ಭೇಟಿ ನೀಡುತ್ತಿದ್ದೇವೆ. ಹೈಕಮಾಡ್ ಜೊತೆಗೆ ಚರ್ಚಿಸಿ ಹೆಸರುಗಳನ್ನು ಅಂತಿಮಗೊಳಿಸುತ್ತೇವೆಂದು ಹೇಳಿದ್ದರು.

ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲು ಪಕ್ಷಕ್ಕೆ ಒಪ್ಪಿಗೆ ನೀಡಿರುವುದರಿಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಶಿವಕುಮಾರ್ ಅವರ ನಿಷ್ಠಾವಂತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.

ಪರಮೇಶ್ವರ, ಕೆ ಎಚ್‌ ಮುನಿಯಪ್ಪ, ಎಚ್‌ ಸಿ ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ಶಿವರಾಜ್‌ ತಂಗಡಗಿ, ರೂಪಕಲಾ ಎಂ (ಮುನಿಯಪ್ಪ ಪುತ್ರಿ) ಸೇರಿದಂತೆ 22 ಎಸ್‌ಸಿ ಮತ್ತು 15 ಎಸ್‌ಟಿ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಪರಮೇಶ್ವರ್ ಅವರು, ಕಾಂಗ್ರೆಸ್-ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗಲೇ ನನ್ನನ್ನು ಉಪ ಮುಖ್ಯಮಂತ್ರಿ ಮಾಡಬೇಕಿತ್ತು. ಈ ಬಾರಿ ನನಗೂ ಡಿಸಿಎ ಸ್ಥಾನ ನೀಡಬೇಕು. ದಲಿತ ಸಮುದಾಯಗಳ ನಿರೀಕ್ಷೆಗಳನ್ನು ಹೈಕಮಾಂಡ್ ಈಡೇರಿಸಬೇಕೆಂದು ಹೇಳಿದ್ದಾರೆ.

ನಿರೀಕ್ಷೆಗಳು ದೊಡ್ಡದಾಗಿದೆ, ಇದನ್ನು ಅರ್ಥಮಾಡಿಕೊಂಡು ನಮ್ಮ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ವಿರೋಧಗಳು ಸಹಜವಾಗುತ್ತದೆ. ಇದನ್ನು ನಾನು ಹೇಳುವ ಅಗತ್ಯವಿಲ್ಲ, ವಿರೋಧಗಳು ಎದುರಾಗುವುದಕ್ಕೂ ಮುನ್ನವೇ ಅದನ್ನು ಸರಿಪಡಿಸುವುದು ಉತ್ತಮ. ಇಲ್ಲದಿದ್ದರೆ ಪಕ್ಷಕ್ಕೆ ಸಮಸ್ಯೆಯಾಗಲಿ ಎಂದು ತಿಳಿಸಿದ್ದಾರೆ.

ಇನ್ನು ಬೆಂಗಳೂರಿನಿಂದ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ, ಕೆ ಜೆ ಜಾರ್ಜ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಮತ್ತು ಬಿ ಝಡ್ ಜಮೀರ್ ಅಹಮದ್ ಖಾನ್, ಹ್ಯಾರಿಸ್ ಹೆಸರುಗಳೂ ಕೂಡ ಕೇಳಿ ಬರುತ್ತಿವೆ.

ಇದಲ್ಲದೆ ಎಂ ಬಿ ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಲಕ್ಷ್ಮಣ ಸವದಿ, ಈಶ್ವರ ಖಂಡ್ರೆ, ಎಸ್ ಎಸ್ ಮಲ್ಲಿಕಾರ್ಜುನ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಲಿಂಗಾಯ ನಾಯಕರಿಗೂ ಸಚಿವ ಸ್ಥಾನ ನೀಡುವಂತೆ ಒತ್ತಡಗಳು ಶುರುವಾಗಿವೆ.

ಒಕ್ಕಲಿಗರಲ್ಲಿ ಎನ್ ಚೆಲುವರಾಯಸ್ವಾಮಿ, ಎಚ್ ಸಿ ಬಾಲಕೃಷ್ಣ, ಕೆಎಂ ಶಿವಲಿಂಗೇಗೌಡ ಸೇರಿದಂತೆ ಇತರರನ್ನು ಕಾಂಗ್ರೆಸ್ ಪರಿಗಣಿಸುವ ಸಾಧ್ಯತೆ ಇದೆ.

ಒಬಿಸಿ ಕೋಟಾದಡಿ ಬಿ ಕೆ ಹರಿಪ್ರಸಾದ್ (ಎಂಎಲ್‌ಸಿ), ಅಜಯ್ ಸಿಂಗ್ ಮತ್ತು ಮಧು ಬಂಗಾರಪ್ಪ ಅವರ ಹೆಸರುಗಳು ಕೇಳಿ ಬರುತ್ತಿವೆ.

ಮುಸ್ಲಿಂ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಸಲೀಂ ಅಹಮದ್ (ಎಂಎಲ್‌ಸಿ), ತನ್ವೀರ್ ಸೇಠ್, ರಹೀಮ್ ಖಾನ್, ಯುಟಿ ಖಾದರ್, ಕನೀಜ್ ಫಾತಿಮಾ ಸೇರಿದಂತೆ ಇತರರು ಇದ್ದಾರೆ.

ಸಚಿವ ಸಂಪುಟದಲ್ಲಿ ಬೆಳಗಾವಿಗೆ ಸೂಕ್ತ ಪ್ರಾತಿನಿಧ್ಯದ ಅಗತ್ಯವಿದೆ. 18 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಗೆದ್ದಿರುವ ಬೆಳಗಾವಿಗೆ ಕನಿಷ್ಠ ಮೂರು ಸಚಿವ ಸ್ಥಾನಗಳು ನಮಗೆ ಬೇಕು ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.

ಈ ನಡುವೆ ಸ್ಪೀಕರ್ ಸ್ಥಾನಕ್ಕೆ ಹಿರಿಯ ಶಾಸಕರಾದ ಆರ್‌ವಿ ದೇಶಪಾಂಡೆ, ಟಿಬಿ ಜಯಚಂದ್ರ ಮತ್ತು ಎಚ್‌ಕೆ ಪಾಟೀಲ್‌'ರಲ್ಲಿ ಒಬ್ಬರನ್ನು ಪರಿಗಣಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com