ರಾಜ್ಯ ವಿಧಾನಸಭಾ ಅಧಿವೇಶನ: ಸಿಎಂ, ಡಿಸಿಎಂ ಸೇರಿ ನೂತನ ಸಚಿವರು ಹಾಗೂ ಶಾಸಕರ ಪ್ರಮಾಣ ವಚನ ಸ್ವೀಕಾರ

16ನೇ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನದ ಕಲಾಪ ಸೋಮವಾರ ಆರಂಭಗೊಂಡಿದ್ದು, ಮೊದಲ ದಿನದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಸೇರಿ ನೂತನ ಸಚಿವರು ಹಾಗೂ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್.
ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್.
Updated on

ಬೆಂಗಳೂರು: 16ನೇ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನದ ಕಲಾಪ ಸೋಮವಾರ ಆರಂಭಗೊಂಡಿದ್ದು, ಮೊದಲ ದಿನದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಸೇರಿ ನೂತನ ಸಚಿವರು ಹಾಗೂ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸೋಮವಾರದಿಂದ ಬುಧವಾರದವರೆಗೆ (ಮೇ 22ರಿಂದ ಮೇ 24) ವಿಧಾನಸಭೆ ಅಧಿವೇಶನ ನಡೆಯಲಿದ್ದು, ಇಂದು ಬೆಳಗ್ಗೆ 11.15ರ ಹೊತ್ತಿಗೆ ಅಧಿವೇಶನ ಆರಂಭವಾಗಿದೆ.

ಮೊದಲ ಎರಡು ದಿನಗಳ ಕಾಲ ಎಲ್ಲ ಶಾಸಕರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಮೂರನೇ ದಿನ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ.

ಶಾಸಕರಿಗೆ ಪ್ರಮಾಣವಚನ ಬೋಧಿಸುವ ಜವಾಬ್ದಾರಿಯನ್ನು ಹಿರಿಯ ಶಾಸಕ, ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಅವರು ವಹಿಸಿಕೊಂಡಿದ್ದಾರೆ. ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಲಾಗಿದೆ.

ಈ ನಡುವೆ, ಶಾಸಕರಿಗೆ ಪ್ರಮಾಣವಚನ ಬೋಧಿಸುವ ಹಂಗಾಮಿ ಸ್ಪೀಕರ್‌ ಅವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು. ಇದು ರಾಜಭವನದಲ್ಲಿ ನಡೆಯುವ ಪ್ರಕ್ರಿಯೆಯಾಗಿದೆ. ಅದಾದ ಬಳಿಕ ವಿಧಾನಸಭೆಯಲ್ಲಿ ಶಾಸಕರಿಗೆ ಪ್ರಮಾಣವಚನ ಬೋಧನೆ ಆರಂಭಗೊಂಡಿತು.

ಇದರಂತೆ ಹಂಗಾಮಿ ಸ್ಪೀಕರ್ ದೇಶಪಾಂಡೆಯವರು ಎಲ್ಲಾ ಶಾಸಕರಿಗೆ ಪ್ರತ್ಯೇಕವಾಗಿ ಪ್ರಮಾಣ ವಚನ ಬೋಧನೆ ನಡೆಸುತ್ತಿದ್ದಾರೆ. ಮೊದಲಿಗೆ ಶಾಸಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸಿದ್ದರಾಮಯ್ಯ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಸಿದರು. ಇನ್ನು ಕನಕಪುರ ಕ್ಷೇತ್ರದ ಶಾಸಕರಾಗಿ ಡಿ.ಕೆ.ಶಿವಕುಮಾರ್ ಅವರು, ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಜೊತೆ ಸಚಿವರಾಗಿರುವ ಡಾ. ಜಿ. ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ, ಕೆ.ಜೆ. ಜಾರ್ಜ್‌, ಎಂ.ಬಿ.ಪಾಟೀಲ, ಪ್ರಿಯಾಂಕ್‌ ಖರ್ಗೆ ಪ್ರಮಾಣವಚನ ಸ್ವೀಕರಿಸಿದರು.

ಕೊರಟಗೆರೆ ಕ್ಷೇತ್ರದ ಶಾಸಕರಾಗಿ ಡಾ.ಜಿ.ಪರಮೇಶ್ವರ್ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ದೇವನಹಳ್ಳಿ ಶಾಸಕರಾಗಿ ಕೆ.ಹೆಚ್.ಮುನಿಯಪ್ಪ, ಸರ್ವಜ್ಞನಗರ ಕ್ಷೇತ್ರದ ಶಾಸಕರಾಗಿ ಕೆ.ಜೆ.ಜಾರ್ಜ್, ಬಬಲೇಶ್ವರ ಕ್ಷೇತ್ರದ ಶಾಸಕರಾಗಿ ಎಂ.ಬಿ.ಪಾಟೀಲ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
 
ಈ ನಡುವೆ ಅಧಿವೇಶನಕ್ಕೆ 7 ಸಚಿವರ ಪೈಕಿ ರಾಮಲಿಂಗಾರೆಡ್ಡಿ ಮತ್ತು ಜಮೀರ್ ಅಹಮದ್ ಖಾನ್ ಗೈರಾಗಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಯಮಕನಮರಡಿ ಶಾಸಕರಾಗಿ ಸತೀಶ್​ ಜಾರಕಿಹೊಳಿ, ಚಿತ್ತಾಪುರ ಶಾಸಕರಾಗಿ ಪ್ರಿಯಾಂಕ್ ಖರ್ಗೆ, ಬಿಟಿಎಂ ಲೇಔಟ್​ ಶಾಸಕರಾಗಿ ರಾಮಲಿಂಗಾರೆಡ್ಡಿ, ಮಂಗಳೂರು ಶಾಸಕರಾಗಿ ಯು.ಟಿ.ಖಾದರ್​, ಬಸವನಬಾಗೇವಾಡಿ ಶಾಸಕರಾಗಿ ಶಿವಾನಂದ ಪಾಟೀಲ್ ಅವರು ಪ್ರಮಾಣವಚನ ಸ್ವೀಕರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com