ಕಲಬುರಗಿಯಲ್ಲಿ ಗರಿಗೆದರಿದ ನಿರೀಕ್ಷೆ: ಕಿತ್ತೂರು ಕರ್ನಾಟಕ-ಕಲ್ಯಾಣ ಕರ್ನಾಟಕದ ಮೂರರಿಂದ ನಾಲ್ವರಿಗೆ ಸಂಪುಟ ಸ್ಥಾನ!

ವಿಧಾನಸಭೆ ಅಧಿವೇಶನ ಮುಗಿದ ನಂತರ ಸಂಪುಟ ವಿಸ್ತರಣೆಯಾದಾಗ ಕಿತ್ತೂರು-ಕರ್ನಾಟಕ ಭಾಗದ ಮೂರ್ನಾಲ್ಕು ಶಾಸಕರು ಮತ್ತು ಕಲ್ಯಾಣ ಕರ್ನಾಟಕದ ಅಷ್ಟೇ ಸಂಖ್ಯೆಯ ಶಾಸಕರು ಸಂಪುಟ ಸ್ಥಾನ ಪಡೆಯಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. 
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ವಿಧಾನಸಭೆ ಅಧಿವೇಶನ ಮುಗಿದ ನಂತರ ಸಂಪುಟ ವಿಸ್ತರಣೆಯಾದಾಗ ಕಿತ್ತೂರು-ಕರ್ನಾಟಕ ಭಾಗದ ಮೂರ್ನಾಲ್ಕು ಶಾಸಕರು ಮತ್ತು ಕಲ್ಯಾಣ ಕರ್ನಾಟಕದ ಅಷ್ಟೇ ಸಂಖ್ಯೆಯ ಶಾಸಕರು ಸಂಪುಟ ಸ್ಥಾನ ಪಡೆಯಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. 

ಆದರೆ, ಕಲಬುರಗಿ ಜಿಲ್ಲೆಯ ಎಷ್ಟು ಶಾಸಕರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ಜಿಲ್ಲೆಯು ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಬರುತ್ತದಾ ಎಂದು ಮರುಪ್ರಶ್ನೆ ಕೇಳಿದ್ದು, ಜಿಲ್ಲೆಯ 9 ಸ್ಥಾನಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಗೆದ್ದಿದ್ದರೂ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ಸಿಗದಿರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ.

ಕಲಬುರ್ಗಿಯ ಜೇವರ್ಗಿಯಿಂದ ಸತತ ಮೂರು ಬಾರಿ ಗೆದ್ದಿರುವ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಡಾ. ಅಜಯ್ ಸಿಂಗ್ ಹಾಗೂ ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಗೆ ಕನಿಷ್ಠ ಎರಡು ಸಚಿವ ಸ್ಥಾನ ಸಿಗುತ್ತದೆ ಎಂಬ ಭಾವನೆಯಲ್ಲಿದ್ದಾರೆ.

ಈಗಾಗಲೇ ಡಾ. ಅಜಯ್ ಸಿಂಗ್, ಡಾ. ಶರಣ ಪ್ರಕಾಶ ಪಾಟೀಲ್, ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರ ಅನುಯಾಯಿಗಳು ಇವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 41 ಸ್ಥಾನಗಳ ಪೈಕಿ 26ರಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದು, ಈ ಭಾಗದಿಂದ ಕನಿಷ್ಠ ಆರು ಮಂದಿಗೆ, ಕಲಬುರಗಿಯಿಂದ ಮೂವರು ಹಾಗೂ ಉಳಿದ ನಾಲ್ಕು ಜಿಲ್ಲೆಗಳಿಂದ ಮೂವರು ಶಾಸಕರು ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. 

ಬೀದರ್ ಕೋಟಾದಲ್ಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ, ಮಾಜಿ ಸಚಿವ ಹಾಗೂ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಮಾಜಿ ಸಚಿವ ಹಾಗೂ ಯಲಬುರಗಾ ಶಾಸಕ ಬಸವರಾಜ ರಾಯರೆಡ್ಡಿ, ಬಳ್ಳಾರಿ ಜಿಲ್ಲೆಯ ಶಾಸಕ ನಾಗೇಂದ್ರ ಅವರಿಗೆ ಸ್ಥಾನ ಕಲ್ಪಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com