ವಿದ್ಯುತ್ ಬಿಲ್ ಕಟ್ಟಬೇಡಿ, ಮಹಿಳೆಯರೆಲ್ಲರೂ ಉಚಿತವಾಗಿ ಪ್ರಯಾಣಿಸಿ: ಹೆಚ್.ಡಿ.ಕುಮಾರಸ್ವಾಮಿ

ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಗ್ಯಾರಂಟಿ ಕಾರ್ಡ್​ ಹೆಸರಲ್ಲಿ ಕಾಂಗ್ರೆಸ್ ಪಕ್ಷ ಕುತಂತ್ರ ರಾಜಕಾರಣ ಮಾಡಿದೆ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಕಾಂಗ್ರೆಸ್ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಗ್ಯಾರಂಟಿ ಕಾರ್ಡ್​ ಹೆಸರಲ್ಲಿ ಕಾಂಗ್ರೆಸ್ ಪಕ್ಷ ಕುತಂತ್ರ ರಾಜಕಾರಣ ಮಾಡಿದೆ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಕಾಂಗ್ರೆಸ್ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ವಿರುದ್ಧ ಕಾಂಗ್ರೆಸ್ ಶೇ.40 ಕಮಿಷನ್ ಆರೋಪ ಮಾಡುತ್ತಿದೆ, ಆದರೆ, ಕಾಂಗ್ರೆಸ್ ಪಕ್ಷವೇ 5 ಸಾವಿರ ರೂ. ಗಿಫ್ಟ್ ಕೊಡುತ್ತೇವಂದು ಜನರಿಗೆ ವಂಚನೆ ಮಾಡಿದೆ. ಇದಕ್ಕೆ ನೀವು ಎಷ್ಟು ಪರ್ಸೆಂಟ್ ಕಮಿಷನ್ ಹೊಡೆಯುತ್ತೀರಾ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಆರ್​ಆರ್​ ನಗರದಲ್ಲಿ ಕುಸುಮಾ, ಕುಣಿಗಲ್ ಕ್ಷೇತ್ರದಲ್ಲಿ ರಂಗನಾಥ್​​, ರಾಮನಗರದಲ್ಲಿ ಇಕ್ಬಾಲ್​, ಮಾಗಡಿಯಲ್ಲಿ ಬಾಲಕೃಷ್ಣರಿಂದ ಕೂಪನ್ ಹಂಚಿಕೆ ಮಾಡಲಾಗಿದೆ. ಇಂತಹ ಅಕ್ರಮ ಕೂಪನ್​ಗಳಿಂದ ನಮ್ಮ ಪಕ್ಷ ಹಲವೆಡೆ ಸೋತಿದೆ. ನಿಮ್ಮ ಯೋಗ್ಯತೆಗೆ ಈ ರೀತಿ ಚುನಾವಣೆ ನಡೆಸಿ, ನಮ್ಮ ಪಕ್ಷಕ್ಕೆ ವಿಸರ್ಜನೆ ಮಾಡಿ ಅಂತ ಹೇಳುತ್ತೀರಾ ಎಂದು ಕಿಡಿಕಾರಿದರು.

ಮೊದಲು ಸಿದ್ದರಾಮಯ್ಯ ಅವರು, ಕಾಂಗ್ರೆಸ್​ನ ಅಕ್ರಮ ಕೂಪನ್​ ಬಗ್ಗೆ ತನಿಖೆ ನಡೆಸಲಿ ಎಂದು ಇದೇ ವೇಳೆ ಆಗ್ರಹಿಸಿದರು.

ಚುನಾವಣೆಗೂ ಮುನ್ನ ನಿನಗೂ ಫ್ರೀ, ನನಗೂ ಫ್ರೀ ಎಂದು ಇದೇ ಸಿಎಂ ಸಿದ್ದರಾಮಯ್ಯ ಹೇಳಿದ್ದರು, ಮೊದಲ ಸಂಪುಟದಲ್ಲೇ ಎಲ್ಲಾ ಗ್ಯಾರಂಟಿ ಜಾರಿ ಎಂದು ಹೇಳಿದ್ದರು. ಆದರೀಗ ಕಂಡಿಷನ್ಸ್ ಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ. ಎಲ್ಲರಿಗೂ 5 ಗ್ಯಾರಂಟಿ ಫ್ರೀ ಎಂದಿದ್ದ ಸಿದ್ದರಾಮಯ್ಯ, ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದರು. ಆದರೆ, ಈವರೆಗೆ ಜಾರಿ ಮಾಡಿಲ್ಲ. ಅವರು ಕುತಂತ್ರ ರಾಜಕಾರಣ ನಡೆಸಿ ರಾಜ್ಯದ ಜನರನ್ನು ವಂಚಿಸಿದ್ದಾರೆ. ಗ್ಯಾರಂಟಿ ಘೋಷಣೆ ಮುನ್ನವೇ ಷರತ್ತುಗಳ ಬಗ್ಗೆ ಏಕೆ ಹೇಳಲಿಲ್ಲ. ನಿಮ್ಮ ಕುತಂತ್ರದ ರಾಜಕೀಯಕ್ಕೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ರಾಜ್ಯದ ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ​. ಯಾವ ಮಹಿಳೆ ಕೂಡ ಟಿಕೆಟ್​ ಖರೀದಿಸಬೇಡಿ. ಉಚಿತವಾಗಿ ಸರ್ಕಾರಿ ಬಸ್​ಗಳಲ್ಲಿ ಪ್ರಯಾಣಿಸಿ ಎಂದೂ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com