ಸಂಸತ್ ಭವನ ಉದ್ಘಾಟನೆಗೆ ಕಾಂಗ್ರೆಸ್ ವಿರೋಧ: ಹೆಚ್'ಡಿ ಕುಮಾರಸ್ವಾಮಿ ಕೆಂಡಾಮಂಡಲ

ನೂತನ ಸಂಸತ್ ಭವನ ಉದ್ಘಾಟನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಜೆಡಿಎಸ್ ನಾಯಕ ಹೆಚ್'ಡಿ.ಕುಮಾರಸ್ವಾಮಿಯವರು ಶುಕ್ರವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ನೂತನ ಸಂಸತ್ ಭವನ ಉದ್ಘಾಟನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಜೆಡಿಎಸ್ ನಾಯಕ ಹೆಚ್'ಡಿ.ಕುಮಾರಸ್ವಾಮಿಯವರು ಶುಕ್ರವಾರ ತೀವ್ರವಾಗಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಷ್ಟ್ರಪತಿಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇದ್ದಕ್ಕಿದ್ದಂತೆ ಪ್ರೀತಿ, ಗೌರವ ಬಂದಿದೆ. ಅಷ್ಟೊಂದು ಗೌರವ ಇರುವ ಕಾಂಗ್ರೆಸ್, ದ್ರೌಪದಿ ಮುರ್ಮು ವಿರುದ್ದವೇಕೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು? ಈಗ ಬಿಜೆಪಿ ಆದಿವಾಸಿಗಳನ್ನು ಅವಮಾನಿಸುತ್ತಿದ್ದಾರೆಂದು ಆರೋಪಿಸುತ್ತಿದೆ. ಇದೆಲ್ಲವೂ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಸಮಾಜದ ಒಂದು ವರ್ಗದ ಮತಗಳನ್ನು ಗಳಿಸಲು ಮಾಡುತ್ತಿರುವ ಪ್ರಯತ್ನಗಳಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಸತ್ ಭವನ ಒಂದು ಪಕ್ಷಕ್ಕೆ, ವ್ಯಕ್ತಿಗೆ ಸೀಮಿತವಲ್ಲ. ದೇಶದ ತೆರಿಗೆ ಹಣದಿಂದ ಕಟ್ಟಿರುವ ಭವನ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಧ್ವನಿ ಎತ್ತಿದ್ದಾರೆ. ರಾಷ್ಟ್ರಪತಿಯಾಗಿರುವ ಆದಿವಾಸಿ ಮಹಿಳೆಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಧ್ವನಿ ಎತ್ತಿದೆ. ಯಾವುದೇ ಭವನವನ್ನು ಉದ್ಘಾಟನೆ ಮಾಡಬೇಕಾದಾಗ ರಾಷ್ಟ್ರಪತಿ, ರಾಜ್ಯಪಾಲರನ್ನು ಕರೆದ ಉದಾಹರಣೆ ಇಲ್ಲ. ಛತ್ತೀಸ್ಗಢ ವಿಧಾನಸಭೆ ಅಡಿಗಲ್ಲಿಗೆ ಸೋನಿಯಾಗಾಂಧಿ, ರಾಹುಲ್ ಗಾಂಧಿಯನ್ನು ಕರೆದಿದ್ದರು. ರಾಜ್ಯಪಾಲರನ್ನು ಕರೆಸಿ ಅಡಿಗಲ್ಲು ಹಾಕಿಸಿರಲಿಲ್ಲ. ಕರ್ನಾಟಕದ ವಿಕಾಸಸೌಧವನ್ನು ಅಂದಿನ ಮುಖ್ಯಮಂತ್ರಿ ಉದ್ಘಾಟನೆ ಮಾಡಿದ್ದರು. ಕಾಂಗ್ರೆಸ್ ಪಕ್ಷ ಈಗ ರಾಷ್ಟ್ರಪತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ನಾವೇನು ಕಾಂಗ್ರೆಸ್‌ ಪಕ್ಷದ ಗುಲಾಮರಲ್ಲ, ನಮ್ಮದೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವೇಕೆ ಕಾಂಗ್ರೆಸ್ ಅನುಸರಿಸಬೇಕು? ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com