ರಾಯಚೂರಿನಲ್ಲಿ ಕಲುಷಿತ ನೀರು ಸೇವನೆಯಿಂದ ಬಾಲಕ ಸಾವು: ಪಿಡಿಒ ಅಮಾನತು, ಎಫ್‌ಐಆರ್ ದಾಖಲು
ರಾಯಚೂರು ಜಿಲ್ಲೆಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಶನಿವಾರ ಅಮಾನತುಗೊಳಿಸಿದೆ.
Published: 27th May 2023 04:34 PM | Last Updated: 27th May 2023 04:34 PM | A+A A-

ಸಂಗ್ರಹ ಚಿತ್ರ
ರಾಯಚೂರು: ಜಿಲ್ಲೆಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಶನಿವಾರ ಅಮಾನತುಗೊಳಿಸಿದೆ.
ಕರ್ತವ್ಯಲೋಪ ಎಸಗಿದ ಪಿಡಿಒ ರೇಣುಕಾ ಅವರನ್ನು ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಅಮಾನತುಗೊಳಿಸಿದ್ದಾರೆ.
ಮೃತ ಬಾಲಕ ಹನುಮೇಶ್ ತಂದೆ ಈಶ್ವರಪ್ಪ ಅವರು ತಮ್ಮ ಮಗನ ಸಾವಿಗೆ ಪಿಡಿಒ ರೇಣುಕಾ ಕಾರಣ ಎಂದು ದೇವದುರ್ಗ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರಿಯಮ್ಮ ನಾಯಕ್ ಹೇಳಿದ್ದಾರೆ.
ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಗೆ ಹಾನಿಯಾಗಿರುವ ಬಗ್ಗೆ ರೇಣುಕಾ ಅವರಿಗೆ ತಿಳಿಸಿದರೂ ದುರಸ್ತಿ ಮಾಡಿಲ್ಲ. ಕೊಳಚೆ ನೀರು ಕುಡಿಯುವ ನೀರಿಗೆ ಸೇರಿಕೊಂಡು ಅನಾಹುತಕ್ಕೆ ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಲುಷಿತ ನೀರು ಸೇವನೆಯಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಗ್ರಾಮಸ್ಥರು ನೀರು ಸೇವಿಸಿ ಅಸ್ವಸ್ಥಗೊಂಡಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ 30 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ರೇಕಲಮರಡಿ ಗ್ರಾಮದಲ್ಲಿ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಅಗತ್ಯವಿರುವ ವೈದ್ಯಕೀಯ ಉಪಕರಣಗಳು, ಔಷಧಿಗಳನ್ನು ಒದಗಿಸಲಾಗಿದೆ ಮತ್ತು ತಾತ್ಕಾಲಿಕ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಜನರಿಗೆ ವಾಂತಿ ಮತ್ತು ಬೇದಿಯ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಲು ತಿಳಿಸಲಾಗಿದೆ. ಬಿಸಿ ಅಥವಾ ಕುದಿಸಿದ ನೀರನ್ನು ಮಾತ್ರ ಕುಡಿಯಲು ಗ್ರಾಮಸ್ಥರಿಗೆ ನಿರ್ದೇಶನ ನೀಡಲಾಗಿದೆ.
ಅಸ್ವಸ್ಥರಾದವರನ್ನು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ಮತ್ತು ಅರಕೇರಾ ಮತ್ತು ದೇವದುರ್ಗದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.