ಗ್ಯಾರಂಟಿ ಅನುಷ್ಠಾನದಲ್ಲಿ ಕಾಂಗ್ರೆಸ್ ನಿಂದ ಜನತೆಗೆ ದೋಖಾ: ಬಸವರಾಜ ಬೊಮ್ಮಾಯಿ

ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳ ಜಾರಿ ವಿಚಾರದಲ್ಲಿ ಜನರಿಗೆ ಕಾಂಗ್ರೆಸ್  ದೋಖಾ ಮಾಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳ ಜಾರಿ ವಿಚಾರದಲ್ಲಿ ಜನರಿಗೆ ಕಾಂಗ್ರೆಸ್ ದೋಖಾ ಮಾಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಕೇಂದ್ರ ಸರ್ಕಾರ ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಉಚಿತ, ನಮಗೂ ಫ್ರೀ ನಿಮಗೂ ಫ್ರೀ ಅಂತ ಜನರಿಗೆ ಭರವಸೆ ನೀಡಿ, ಈಗ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದು ನೋಡಿದರೆ ಜನರಿಗೆ ಕಾಂಗ್ರೆಸ್ ದೋಖಾ ಮಾಡಿದೆ. ತಾತ್ವಿಕ ಆದೇಶದಲ್ಲಿಯೂ ಎಲ್ಲರಿಗೂ ಉಚಿತ ಎಂದು ಹೇಳಿದ್ದರು. ಈಗ ಬೇರೆ ಬೇರೆ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ನವರು ಹೇಳುವುದೊಂದು ಮಾಡುವುದೊಂದು. ಅವರ ಬಣ್ಣ ಬಯಲಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ರಾಜ್ಯ ಸರ್ಕಾರ ರಾಜ್ಯದ ಜನತೆಗೆ ತಲುಪಿಸುವ ಕೆಲಸ ಮಾಡಬೇಕು. ಇದರಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟವಾಗಲಿದೆ. ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಸುಮಾರು 54 ಲಕ್ಷ ರೈತರಿಗೆ ಸುಮಾರು 1,6000 ಕೋಟಿ ರೂ. ನೇರವಾಗಿ ರೈತರಿಗೆ ತಲುಪಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಎಲ್ಲರಿಗೂ ಸೂರು ಕಲ್ಪಿಸುವ ಕೆಲಸ ಮಾಡಲಾಗಿದೆ. ಮೋದಿ ಅವರು ಪ್ರಧಾನಿಯಾದ ಮೇಲೆ ವಿಶ್ವಮಾನ್ಯತೆ‌ ದೊರೆತಿದೆ ಎಂದು ಅವರು ಹೇಳಿದರು. 

<strong>ನಳಿನ್ ಕುಮಾರ್ ಕಟೀಲ್, ಮೀನಾಕ್ಷಿ ಲೇಖಿ, ಬಸವರಾಜ ಬೊಮ್ಮಾಯಿ, ಡಾ. ಸಿ.ಅಶ್ವತ್ಥನಾರಾಯಣ</strong>
ನಳಿನ್ ಕುಮಾರ್ ಕಟೀಲ್, ಮೀನಾಕ್ಷಿ ಲೇಖಿ, ಬಸವರಾಜ ಬೊಮ್ಮಾಯಿ, ಡಾ. ಸಿ.ಅಶ್ವತ್ಥನಾರಾಯಣ

ವಿಶ್ವ ಮಾನ್ಯ ನಾಯಕರಾದಂತಹ ನರೇಂದ್ರ‌ಮೋದಿ ನೇತೃತ್ವದ ಸರ್ಕಾರ 9 ವರ್ಷ ಪೂರ್ಣಗೊಳಿಸಿದೆ. ಒಂಭತ್ತು ವರ್ಷದಲ್ಲಿ ಸಾಕಷ್ಟು ಬದಲಾಗಿದೆ. ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಉನ್ನತೀಕರಣ ಆಗಿರುವುದನ್ನು ನಾವು ನೋಡಿದ್ದೇವೆ. ಯುಪಿಎ ಅವಧಿಯಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗಿತ್ತು. ರಾಷ್ಟ್ರದ ಸುರಕ್ಷತೆ ಮತ್ತು ಏಕತೆ ಅಖಂಡತೆಯನ್ನು ಕಾಪಾಡುವ ಕೆಲಸ ಮಾಡಿದರು. ಆರ್ಟಿಕಲ್ 370 ರದ್ದು ಮಾಡುವ ಮೂಲಕ ದೇಶದ ಏಕತೆ ಕಾಪಾಡಿದರು. ಪ್ರಧಾನಿಯಾದ ಮೇಲೆ ಮೋದಿಯವರು ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿ.ಎಸ್.ಟಿ ಜಾರಿಗೆ ತಂದರು. ಇದರಿಂದ ದೇಶ ಹಾಗೂ ರಾಜ್ಯಗಳ ಆರ್ಥಿಕ ಪ್ರಗತಿ ಹೆಚ್ಚಾಯಿತು. ಮೊದಲ ಐದು ರಾಜ್ಯಗಳಿಗೆ 14% ಗ್ಯಾರೆಂಟಿ ಫಂಡ್ ಬರುವಂತೆ ಮಾಡಿದರು ಎಂದು ತಿಳಿಸಿದರು. 

ಕಳೆದ ಎಪ್ಪತ್ತು ವರ್ಷದಲ್ಲಿ ನಾಲ್ಕೂವರೆ ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿತ್ತು. ಕಳೆದ ಒಂಬತ್ತು ವರ್ಷದಲ್ಲಿ 5 ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ವಿಶೇಷ ಅನುದಾನ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5 ಸಾವಿರ ಕೋಟಿ ನೀಡಿದ್ದಾರೆ. ಮೆಟ್ರೋ ಯೋಜನೆಗೆ ಐದು ಸಾವಿರ ಕೋಟಿ ನಿಡಿದ್ದಾರೆ. ನಾಲ್ಕು ಮೆಡಿಕಲ್ ಕಾಲೇಜು, ಐಐಟಿ, ಕರಾವಳಿ ಅಭಿವೃದ್ಧಿಗೆ 1250 ಕೋಟಿ ನೀಡಿದ್ದಾರೆ. ಕರಾವಳಿಯಲ್ಲಿ ಸಿಆರ್ ಝಡ್ ಗೆ ಅನುಮತಿ ನೀಡಿದ್ದಾರೆ. ಕಲಬುರ್ಗಿಯಲ್ಲಿ 1 ಲಕ್ಷ ಉದ್ಯೋಗ ನೀಡುವ ಜವಳಿ ಪಾರ್ಕ್ ಗೆ ಅನುಮತಿ ನೀಡಿದ್ದಾರೆ ಎಂದರು.

ಮುದ್ರಾ ಯೋಜನೆ ಅಡಿಯಲ್ಲಿ 60 ಲಕ್ಷ ಉದ್ಯಮಿಗಳಿಗೆ ಅನುಕೂಲವಾಗಿದೆ‌. ರೈತರಿಗೆ ಅತ್ಯಂತ ಪ್ರಮುಖವಾಗಿ ಎಮ್ ಎಸ್ ಪಿ ನೀಡುವ ಮೂಲಕ ರೈತರ ನೆರವಿಗೆ ನಿಂತಿದ್ದಾರೆ. ಭಾರತ ಆರ್ಥಿಕವಾಗಿ ಸಾಕಷ್ಟು ಸಮರ್ಥವಾಗಿದ್ದು ಐದು ಟ್ರಿಲಿಯನ್ ಆರ್ಥಿಕತೆ ಮಾಡುವ ಗುರಿಗೆ ಕರ್ನಾಟಕವೂ ಕೂಡ ಒಂದು ಟ್ರಿಲಿಯನ್ ಆರ್ಥಿಕ ಶಕ್ತಿ ಮುಟ್ಟಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com