ಯಾವುದೇ ರೀತಿಯ ತನಿಖೆಗೆ ನಾವು ಸಿದ್ಧ: ಮಾಜಿ ಸಿಎಂ ಬೊಮ್ಮಾಯಿ‌

ಯಾವುದೇ ರೀತಿಯ ತನಿಖೆ ಎದುರಿಸಲು ನಾವು ಸಿದ್ಧರಿದ್ದೇವೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ.
ಮಾಜಿ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ಯಾವುದೇ ರೀತಿಯ ತನಿಖೆ ಎದುರಿಸಲು ನಾವು ಸಿದ್ಧರಿದ್ದೇವೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ.

ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಅಕ್ರಮಗಳ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಪತ್ರ ಬರೆದು 15 ದಿನಗಳಲ್ಲಿ ವರದಿ ನೀಡುವಂತೆ ಆದೇಶಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬೊಮ್ಮಾಯಿಯವರು, ಬಿಜೆಪಿ ಅವಧಿಯಲ್ಲಿ ಆದ ಹಗರಣ ತನಿಖೆ ವಿಚಾರಕ್ಕೆ ಹೆದರಲ್ಲ. ಯಾವುದೇ ಆರೋಪ ಇರಲಿ, ದೂರು ಇರಲಿ, ಯಾವುದೇ ತನಿಖೆ ಬೇಕಾದರೂ ನಡೆಸಲಿ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಐಡಿ ತನಿಖೆ ಮಾಡಬಹುದು ಎಂದು ಈ ಹಿಂದೆಯೇ ಹೇಳಿದ್ದೂ, ದೂರನ್ನೂ ನೀಡಿದ್ದೆ. ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆಯಲ್ಲಿ ಎಫ್ಐಆರ್ ಆಗಿರಲಿಲ್ಲ. ಇದೀಗ ಹೊಸ ಸರ್ಕಾರ ರಚನೆಯಾಗಿದೆ, ಯಾವುದೇ ರೀತಿ ತನಿಖೆ ನಡೆಸಲಿ, ಎದುರಿಸಲು ನಾವು ಸಿದ್ಧ. ತನಿಖೆ ಪಾರದರ್ಶಕವಾಗಿರಲಿ. ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು, ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಆಗಬಾರದು ಎಂದು ಹೇಳಿದರು.

ಪಠ್ಯ ಪುಸ್ತಕ ಬದಲಾವಣೆ ಕುರಿತು ಮಾತನಾಡಿದ ಅವರು, ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ವಿಚಾರಗಳ ಆಧಾರದ ಮೇಲೆ ಕೆಲವು ಹೊಸದಾಗಿ ಪಠ್ಯ ಪುಸ್ತಕದಲ್ಲಿ ಅಳವಡಿಕೆ ಮಾಡಿದ್ದೆವು. ಅವರು ಅದೇ ಜಾಡನ್ನು ಹಿಡಿದು ಹೊಸ ಕಮಿಟಿ ಮಾಡಲು ಹೊರಟಿದ್ದಾರೆ. ಇದಕ್ಕೆ ಸಮಾಜವೇ ಪ್ರತಿಕ್ರಿಯೆ ನೀಡಲಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಪೋಷಕರು ಗಮನಿಸುತ್ತಿದ್ದಾರೆ. ಪಠ್ಯ ಪದೇ ಪದೇ ಬದಲಾವಣೆಯಿಂದ ಮಕ್ಕಳಿಗೆ ಸಮಸ್ಯೆ ಆಗಬಾರದು. ಈ ಜವಾಬ್ದಾರಿ ಸರ್ಕಾರದ ಮೇಲಿದೆ, ಸರ್ಕಾರ ಏನು ಮಾಡಲಿದೆ ನೋಡೋಣ ಎಂದು ತಿಳಿಸಿದರು.

ಎನ್ಇಪಿ ರದ್ದು ವಿಚಾರದ ಕುರಿತು ಮಾತನಾಡಿ, ಮಕ್ಕಳು ಅಧ್ಯಯನ ಶುರು ಮಾಡಿದ್ದಾರೆ. ಎನ್ಇಪಿ ಮಾಡುವಾಗಲೇ ಸಮಿತಿ ಮಾಡಿ, ರಾಜ್ಯದ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ. ಎಲ್ಲ ತಜ್ಞರ ಅಭಿಪ್ರಾಯ ಪಡೆದು ಜಾರಿಗೆ ತರಲಾಗಿದೆ. ಈಗ ರದ್ದು ಮಾಡುವುದು ಸರಿಯಲ್ಲ ಎಂದರು.

ಗ್ಯಾರಂಟಿ ಯೋಜನೆ ಜಾರಿ ಕುರಿತು ಪ್ರತಿಕ್ರಿಯಿಸಿ, ಸುದೀರ್ಘ ಸಭೆಯಲ್ಲಿ ಏನಾಗಿದೆ ಗೊತ್ತಿಲ್ಲ. ಮಾಧ್ಯಮದಿಂದ ತಿಳಿದ ವಿಚಾರವೆಂದರೆ ಎಲ್ಲ ಉಚಿತ ನೀಡಿದರೆ, ಅಭಿವೃದ್ಧಿ ಕಾರ್ಯ ಕುಂಟಿತ ಆಗಲಿದೆ. ಆಶ್ವಾಸನೆ ನೀಡಿದ್ದು ಎಲ್ಲರಿಗೂ ಸಿಗುತ್ತದೆ ಎಂದು. ಅತ್ತೆಗೋ, ಸೊಸೆಗೋ ಎಂದು ಮೊದಲು ಹೇಳಿರಲಿಲ್ಲ. ಏನು ಮಾಡಲಿದ್ದಾರೆ ಎಂಬುದು ಕರ್ನಾಟಕದ ಜನತೆಗೆ ಕಾಡುತ್ತಿದೆ. ಒಂದನೇ ತಾರೀಖು ಸಂಪುಟ ಸಭೆ ಇದೆ. ಅಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಆರ್ಥಿಕವಾಗಿ ಕಷ್ಟ ಎನ್ನುವುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ಜನರನ್ನು ಯಾಮಾರಿಸಿ ಗೆಲ್ಲಬೇಕು ಎಂದು ಮಾಡಿದ್ದಾರೆ. ಜನ ಈಗ ಅಧಿಕಾರ ಕೊಟ್ಟಿದ್ದಾರೆ. ಏನು ಮಾಡುತ್ತಾರೆ ಕಾದು ನೋಡೋಣ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com