ಮೈಸೂರು: ಮೈಸೂರಿನ ನಂಜನಗೂಡು ಮತ್ತು ಕಡಕೋಳ ರೈಲು ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ ಚಾಮರಾಜನಗರ-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಹಳಿತಪ್ಪಿಸಲು ನಡೆಸಲಾಗುತ್ತಿದ್ದ ಯತ್ನವೊಂದನ್ನು ಲೋಕೋಪೈಲಟ್ ಗಳು ತಡೆದಿದ್ದು, ಈ ಮೂಲಕ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ.
ಈ ಸಂಬಂಧ ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೇ ಪೊಲೀಸರು (ಜಿಆರ್‌ಪಿ) ಒಡಿಶಾ ಮೂಲದ ಸೋಮಯ್ ಮರಾಂಡಿ, ಭಜಾನು ಮುರ್ಮು ಮತ್ತು ದಸಮತ್ ಮರಾಂಡಿ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದಾರೆ.
ಹಳಿ ತಪ್ಪಿಸಲು ಯತ್ನಗಳು ನಡೆಯುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಮೈಸೂರಿನ ಆರ್‌ಪಿಎಫ್‌ನ ಪೋಸ್ಟ್ ಕಮಾಂಡರ್ ಎಂಎನ್‌ಎ ಖಾನ್ ಮತ್ತು ಕೆವಿ ವೆಂಕಟೇಶ ಅವರು ಆರ್‌ಪಿಎಫ್ ಸಿಬ್ಬಂದಿ ಹಾಗೂ ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿ, ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿಅನುಮಾನಾಸ್ಪದ ರೀತಿಯಲ್ಲಿ ಓಡಾಡಿಕೊಂಡಿದ್ದ ಒಡಿಶಾ ಮೂಲದ ಸೋಮಯ್ ಮರಾಂಡಿ ಎಂಬಾತನನ್ನು ವಶಕ್ಕೆ ಪಡೆದಿದ್ದರು.
ವಿಚಾರಣೆ ವೇಳೆ ಆತ ಇನ್ನಿಬ್ಬರು ಸೇರಿ ರೈಲನ್ನು ಹಳಿತಪ್ಪಿಸಲು ನಡೆಸಲಾಗಿದ್ದ ಪ್ರಯತ್ನದ ಕುರಿತು ಬಾಯ್ಬಿಟ್ಟಿದ್ದಾನೆ.
ರೈಲನ್ನು ಹಳಿತಪ್ಪಿಸಲು ಸ್ಟೀಲ್ ಸ್ಲೀಪರ್ ಮತ್ತು ಮರದ ದಿಮ್ಮಿಯನ್ನು ಟ್ರ್ಯಾಕ್ ಮೇಲೆ ಇರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದರ ಪರಿಣಾಮ ರೈಲು ಸಂಚಾರದಲ್ಲಿ ಸುಮಾರು ಆರು ನಿಮಿಷಗಳ ಕಾಲ ವಿಳಂಬವಾಗಿತ್ತು.
ದೊಡ್ಡ ದುರಂತವನ್ನು ತಪ್ಪಿಸಿದ್ದಕ್ಕಾಗಿ ಡಿಆರ್‌ಎಂ ಶಿಲ್ಪಿ ಅಗರ್ವಾಲ್ ಅವರು ಲೋಕೋ ಪೈಲಟ್ ಮತ್ತು ಆರ್‌ಪಿಎಫ್ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.
Advertisement