ಬೆಂಗಳೂರು: ''ಯಾವುದನ್ನೂ ಉಚಿತವಾಗಿ ನೀಡಬಾರದು'' ಎಂಬ ಮಾತನ್ನು ಸಾಫ್ಟ್‌ವೇರ್ ಉದ್ಯಮ ದಿಗ್ಗಜ ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ. ಸರ್ಕಾರದ ಯೋಜನೆಗಳು, ಆಡಳಿತ, ಯುವಜನತೆ ಜೀವನ ವಿಧಾನ ಬಗ್ಗೆ ಅವರು ಈ ಹಿಂದೆಯೂ ಮುಕ್ತವಾಗಿ ಮಾತನಾಡಿದ್ದುಂಟು. ಹಲವು ಬಾರಿ ಅವರ ಹೇಳಿಕೆಗಳು ಟ್ರೋಲ್ ಆಗಿವೆ. ನಾರಾಯಣ ಮೂರ್ತಿಯವರ ಈ ಮಾತು ಕೂಡ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರಿನಲ್ಲಿ ನಿನ್ನೆ ಆರಂಭಗೊಂಡ ಟೆಕ್ ಶೃಂಗಸಭೆಯಲ್ಲಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳಿಗೆ ಖಂಡಿತಾ ನನ್ನ ವಿರೋಧವಿಲ್ಲ, ಆದರೆ ಅದನ್ನು ಉಚಿತವಾಗಿ ಪಡೆದುಕೊಂಡವರು ಸಮಾಜಕ್ಕೆ ಉಪಕಾರವಾಗುವಂತೆ ಕೆಲಸ ಮಾಡಿ ಹಿಂತಿರುಗಿ ಕೊಡಬೇಕು. ಆಗ ಉಚಿತ ಉಡುಗೊರೆಗಳಿಗೆ ಅರ್ಥ ಸಿಗುತ್ತದೆ ಎಂದಿದ್ದಾರೆ.
ಭಾರತದಂತಹ ಬಡ ದೇಶವು ಸಮೃದ್ಧ ರಾಷ್ಟ್ರವಾಗಿ ಬೆಳೆಯಲು ಸಹಾನುಭೂತಿಯ ಬಂಡವಾಳಶಾಹಿಯೇ ಏಕೈಕ ಪರಿಹಾರವಾಗಿದೆ ಎಂದು ಸಹ ನುಡಿದರು. ನೀವು ಜನತೆಗೆ ಒಂದು ಸೇವೆ-ಸಬ್ಸಿಡಿಗಳನ್ನು ಒದಗಿಸಿದಾಗ, ಅದರಿಂದ ಅವರು ಏನನ್ನಾದರೂ ಮಾಡಲು ಸಿದ್ಧರಾಗಿರಬೇಕು. ಉದಾಹರಣೆಗೆ, ನೀವು ಉಚಿತ ವಿದ್ಯುತ್ ನೀಡುತ್ತೇವೆ ಎಂದಾಗ, ಪ್ರಾಥಮಿಕ ಶಾಲೆಗಳು ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಶೇಕಡಾ 20 ರಷ್ಟು ಹಾಜರಾತಿ ಹೆಚ್ಚಾಗಬೇಕು. ಅಂದರೆ ಉಚಿತದ ಪ್ರಯೋಜನ ಜನತೆಗೆ ಸಿಕ್ಕಿ ಅದರಿಂದ ಅವರು ಹೊಸದನ್ನು ಸಾಧಿಸಬೇಕು, ಕಲಿಯಬೇಕು, ಬೆಳೆಯಬೇಕು, ಜನರ ಜೀವನ ಮಟ್ಟ ಸುಧಾರಣೆಯಾಗಬೇಕು, ಹಾಗಾದರೆ ಮಾತ್ರ ಸರ್ಕಾರದ ಉಚಿತ ಯೋಜನೆಗಳು ಪ್ರಯೋಜನಕಾರಿಯಾಗುತ್ತದೆ ಎನ್ನುತ್ತಾರೆ.
ನಾನು ಬಡತನದ ಹಿನ್ನೆಲೆಯಿಂದ ಬಂದವನು. ಉಚಿತ ಸಬ್ಸಿಡಿಗಳು ಬಡವರಿಗೆ ಉಪಕಾರವಾಗುತ್ತದೆ ಎಂದು ನನಗೆ ಗೊತ್ತು. ಆದರೆ ಉಚಿತ ಕೊಡುಗೆಗಳನ್ನು ಪಡೆದ ಜನರಲ್ಲಿ ದೊಡ್ಡ ಜವಾಬ್ದಾರಿಗಳಿರುತ್ತವೆ. ಉಚಿತ ಸೇವೆ ಪಡೆದವರು ಹಿಂತಿರುಗಿ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ತಮ್ಮ ಭವಿಷ್ಯದ ಪೀಳಿಗೆಯನ್ನು, ಅವರ ಸ್ವಂತ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಶಾಲೆಗೆ ಹೋಗುವ ವಿಷಯದಲ್ಲಿ ಉತ್ತಮಗೊಳಿಸುವ ನಿಟ್ಟಿನಲ್ಲಿ ಒಳ್ಳೆಯದನ್ನು ಮಾಡಬೇಕು ಎಂದರು.
ಮುಕ್ತ ಮಾರುಕಟ್ಟೆ ಮತ್ತು ಉದ್ಯಮಶೀಲತೆಯ ಅವಳಿ ಸ್ತಂಭಗಳನ್ನು ಆಧರಿಸಿದ ಬಂಡವಾಳಶಾಹಿಯು ಯಾವುದೇ ದೇಶವು ತನ್ನ ಬಡತನದ ಸಮಸ್ಯೆಯನ್ನು ಪರಿಹರಿಸಲು ಏಕೈಕ ಪರಿಹಾರವಾಗಿದೆ ಎಂದು ನಂಬುತ್ತೇನೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅಭಿನಂದಿಸಿದ ಮೂರ್ತಿ, ಇದು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು. ಡಾ ಕೆ ಕಸ್ತೂರಿರಂಗನ್ ಅವರು ಅಧ್ಯಕ್ಷರಾಗಿ ಮತ್ತು ಮಂಜುಲ್ ಭಾರ್ಗವ ಅವರಂತಹ ಜನರು ಎನ್ ಇಪಿ ಭಾಗವಾಗಿದ್ದರು, ಅದು ನಮಗೆ ಉತ್ತಮವಾಗಲು ಒಂದು ಮಾರ್ಗವನ್ನು ತೋರಿಸುತ್ತದೆ ಎಂದು ನನಗೆ ಅಪಾರ ಭರವಸೆ ಇದೆ ಎಂದರು.
ರಾಜಕೀಯ ಪಕ್ಷಗಳು, ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಮತ್ತು ಕಾರ್ಪೊರೇಟ್ ನಾಯಕರು ಒಟ್ಟಾಗಿ ವಿದೇಶಿ ನೇರ ಹೂಡಿಕೆಗಳನ್ನು ಹೆಚ್ಚಿಸುವ ಪ್ರಾಯೋಗಿಕ ಪರಿಹಾರಗಳ ಬಗ್ಗೆ ಯೋಚಿಸಬೇಕು. ಬೆಂಗಳೂರನ್ನು ಉತ್ತಮಗೊಳಿಸಲು, ಉತ್ತಮ ಸಾರ್ವಜನಿಕ ಆಡಳಿತ ವ್ಯವಸ್ಥೆ, ಹೆಚ್ಚಿನ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಮತ್ತು ನಗರದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಅವರು ಸಲಹೆ ನೀಡಿದರು.
Advertisement