ನಾರಾಯಣಮೂರ್ತಿ
ನಾರಾಯಣಮೂರ್ತಿ

ಶಿಕ್ಷಕರ ತರಬೇತಿಗೆ ಭಾರತ ವಾರ್ಷಿಕ 1 ಬಿಲಿಯನ್ ಡಾಲರ್ ಖರ್ಚು ಮಾಡಬೇಕು: ನಾರಾಯಣ ಮೂರ್ತಿ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ತರಬೇಕು ಎಂದಿರುವ ಸಾಫ್ಟ್‌ವೇರ್ ಐಕಾನ್, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರು, ಭಾರತ ಶಿಕ್ಷಕರ ತರಬೇತಿಗಾಗಿ ವಾರ್ಷಿಕ 1 ಬಿಲಿಯನ್ ಡಾಲರ್ ಖರ್ಚು...

ಬೆಂಗಳೂರು: ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ತರಬೇಕು ಎಂದಿರುವ ಸಾಫ್ಟ್‌ವೇರ್ ಐಕಾನ್, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರು, ಭಾರತ ಶಿಕ್ಷಕರ ತರಬೇತಿಗಾಗಿ ವಾರ್ಷಿಕ 1 ಬಿಲಿಯನ್ ಡಾಲರ್ ಖರ್ಚು ಮಾಡಬೇಕು ಎಂದು ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮತ್ತು ನಮ್ಮ ದೇಶದಲ್ಲಿ STEM(ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ) ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ 10,000 ನಿವೃತ್ತ ಶಿಕ್ಷಕರಿಂದ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲು ವರ್ಷಕ್ಕೆ ಒಂದು ಬಿಲಿಯನ್ ಡಾಲರ್ ಖರ್ಚು ಮಾಡಬೇಕು ಎಂದಿದ್ದಾರೆ.

"ನಾವು ನಮ್ಮ ಶಿಕ್ಷಕರು ಮತ್ತು ಸಂಶೋಧಕರಿಗೆ ಹೆಚ್ಚಿನ ಗೌರವವನ್ನು ತೋರಿಸಬೇಕು ಮತ್ತು ಉತ್ತಮ ಸಂಬಳ ನೀಡಬೇಕು. ನಾವು ನಮ್ಮ ಸಂಶೋಧಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಬೇಕು. ನಾವು ಅವರನ್ನು ಗೌರವಿಸಬೇಕು. ಅವರು ನಮ್ಮ ಯುವಕರಿಗೆ ಮಾದರಿಯಾಗಿದ್ದಾರೆ. ಅದಕ್ಕಾಗಿಯೇ ನಾವು 2009 ರಲ್ಲಿ ಇನ್ಫೋಸಿಸ್ ಪ್ರಶಸ್ತಿಯನ್ನು ಸ್ಥಾಪಿಸಿದ್ದೇವೆ. ಭಾರತದಲ್ಲಿ ಸಂಶೋಧನೆಯನ್ನು ಹೆಚ್ಚಿಸಲು ಇದು ನಮ್ಮ ಸಣ್ಣ ಕೊಡುಗೆಯಾಗಿದೆ ಎಂದರು.

ದೇಶದ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ "ಶಿಕ್ಷಕರಿಗೆ ತರಬೇತಿ ನೀಡಲು" 2,500 ಕಾಲೇಜುಗಳನ್ನು ಸ್ಥಾಪಿಸಬೇಕು. ಶಿಕ್ಷಕರಿಗೆ ತರಬೇತಿ ಕೊಡುವ ಈ ಕಾಲೇಜುಗಳಿಗೆ 10,000 ನುರಿತ ಶಿಕ್ಷಕರನ್ನು ನೇಮಿಸಬೇಕೆಂದೂ ನಾರಾಯಣಮೂರ್ತಿ ಸಲಹೆ ನೀಡಿದ್ದಾರೆ.

ಈ 10,000 ಶಿಕ್ಷಕರು ದೇಶ ವಿದೇಶಗಳಿಂದ ಆಯ್ದ ನಿವೃತ್ತ ಹಾಗೂ ಪ್ರತಿಷ್ಠಿತ ಟೀಚರುಗಳಾಗಿರಬೇಕು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಇವರು ಶಿಕ್ಷಕರಿಗೆ ಅತ್ಯುಚ್ಚ ತರಬೇತಿ ನೀಡಬೇಕು. ಈ ತರಬೇತಿ ಕಾರ್ಯಕ್ರಮವು ವರ್ಷಪೂರ್ತಿ ಇರಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನಾಲ್ಕು ಜನರ ಟ್ರೈನರುಗಳ ತಂಡವೊಂದು ಒಂದು 100 ಪ್ರೈಮರಿ ಶಾಲೆ ಮತ್ತು 100 ಪ್ರೌಢಶಾಲೆಯ ಶಿಕ್ಷಕರಿಗೆ ತರಬೇತಿ ನೀಡಬಲ್ಲುದು. ಈ ರೀತಿಯಾಗಿ ನಾವು ಒಟ್ಟು 5 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಬಹುದು. ಹೀಗೆ ತರಬೇತಿ ಪಡೆದ ಶಿಕ್ಷಕರು ಐದು ವರ್ಷದಲ್ಲಿ ಅವರೇ ಟ್ರೈನರುಗಳಾಗಿ ಕಾರ್ಯ ನಿರ್ವಹಿಸಬಹುದು’ ಎಂದು ಇನ್ಫೋಸಿಸ್​ನ ಮಾಜಿ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.

"ವಾಸಯೋಗ್ಯ ನಗರಗಳ ವಿನ್ಯಾಸ, ಮಾಲಿನ್ಯ ನಿರ್ವಹಣೆ, ಸಂಚಾರ ನಿರ್ವಹಣೆ, ಮತ್ತು ಶುದ್ಧ ಹಾಗೂ ಸುರಕ್ಷಿತ ನೀರನ್ನು ಒದಗಿಸುವಂತಹ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ನಾವು ಇನ್ನೂ ಮೊದಲ ಹಂತದಲ್ಲಿಯೇ ಇದ್ದೇವೆ." ದೇಶದ ದೂರದ ಭಾಗದಲ್ಲಿರುವ ನಮ್ಮ ಬಡ ನಾಗರಿಕರ ಜೀವನದ ಮೇಲೆ ಪರಿಣಾಮ ಬೀರುವ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ನಾಲ್ಕನೇ ಹಂತಕ್ಕೆ ಹೋಗಲು ಬಯಸಬೇಕು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com