ಕಾವೇರಿ ವಿವಾದ ಬೆನ್ನಲ್ಲೇ ಕೊಡಗಿನಲ್ಲಿ 2 ದಿನಗಳಿಂದ ಬಿರುಸಿನ ಮಳೆ: ತಗ್ಗಿದ ಆತಂಕ
ಕಾವೇರಿ ವಿವಾದ ತಾರಕಕ್ಕೇರಿರುವ ನಡುವಲ್ಲೇ ಕಾವೇರಿ ಜಲಾಯನ ಪ್ರದೇಶ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಬಿರುಸಿನ ಮಳೆಯಾಗುತ್ತಿದ್ದು. ಇದು ಜನರಲ್ಲಿನ ಆತಂಕವನ್ನು ಕಡಿಮೆ ಮಾಡಿದೆ.
Published: 02nd October 2023 10:11 AM | Last Updated: 02nd October 2023 01:30 PM | A+A A-

ಭಾನುವಾರ ಸುರಿದ ಮಳೆಗೆ ವಿರಾಜಪೇಟೆಯಲ್ಲಿ ಮರವೊಂದು ಉರುಳಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದು.
ಬೆಂಗಳೂರು: ಕಾವೇರಿ ವಿವಾದ ತಾರಕಕ್ಕೇರಿರುವ ನಡುವಲ್ಲೇ ಕಾವೇರಿ ಜಲಾಯನ ಪ್ರದೇಶ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಬಿರುಸಿನ ಮಳೆಯಾಗುತ್ತಿದ್ದು. ಇದು ಜನರಲ್ಲಿನ ಆತಂಕವನ್ನು ಕಡಿಮೆ ಮಾಡಿದೆ.
2 ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗುತ್ತಿದೆ. ಮಡಿಕೇರಿಯಲ್ಲಿ ಭಾನುವಾರ ಕೂಡ ಭಾರೀ ಮಳೆಯಾಗಿದ್ದು, 3 ದಿನಗಳಿಂದ ಸರಾಸರಿ 45 ಮಿ.ಮೀ ಮಳೆಯಾಗಿದೆ.
ಹಾರಂಗಿ ಜಲಾಶಯದ ಸಾಮರ್ಥ್ಯ 2,855.98ಕ್ಕೆ ಏರಿಕೆಯಾಗಿದೆ. ಜಲಾಶಯದ ಸಾಮರ್ಥ್ಯ 2,859 ಅಡಿಗಳಷ್ಟಿದೆ. ಭಾನುವಾರದ ವೇಳೆಗೆ ನದಿಗಳ ಹೊರಹರಿವು 700 ಕ್ಯೂಸೆಕ್‌ನಷ್ಟಿದ್ದರೆ, ಒಳಹರಿವು ನಿಧಾನವಾಗಿ 625 ಕ್ಯೂಸೆಕ್‌ಗೆ ಏರಿಕೆಯಾಗಿದೆ.
ಇದನ್ನೂ ಓದಿ: ನೈಸರ್ಗಿಕ ಹರಿವನ್ನು ನಿಯಂತ್ರಿಸಲಾಗದು, ತಮಿಳುನಾಡಿಗೆ ನಿತ್ಯ 6,500 ಕ್ಯೂಸೆಕ್ ನೀರು ಹರಿಯುತ್ತಿದೆ: ಡಿಕೆ.ಶಿವಕುಮಾರ್
ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಗೆ ವಿರಾಜಪೇಟೆಯಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ತಂತಿಗಳನ್ನು ಸರಿಪಡಿಸುವ ಸಂಬಂಧ ಸೆಸ್ಕ್ ಸಿಬ್ಬಂದಿ ಶ್ರಮ ಪಡುತ್ತಿದ್ದಾರೆ. ಭಾರೀ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದರಿಂದ ಭಾಗಮಂಡಲ ಮತ್ತು ಕೊಂಡಂಗೇರಿಯಲ್ಲಿ ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಗಿದೆ.
ಮಡಿಕೇರಿಯಲ್ಲಿ ಕಳೆದ 24 ಗಂಟೆಗಳಲ್ಲಿ 75.87 ಮಿ.ಮೀ ಮಳೆ ದಾಖಲಾಗಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಕ್ರಮವಾಗಿ 48.72 ಮಿ.ಮೀ ಮತ್ತು 22.7 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಈ ವರ್ಷ 1,989 ಮಿ.ಮೀ ಮಳೆ ದಾಖಲಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 3,174 ಮಿ.ಮೀ ಮಳೆಯಾಗಿತ್ತು.