ನೈಸರ್ಗಿಕ ಹರಿವನ್ನು ನಿಯಂತ್ರಿಸಲಾಗದು, ತಮಿಳುನಾಡಿಗೆ ನಿತ್ಯ 6,500 ಕ್ಯೂಸೆಕ್ ನೀರು ಹರಿಯುತ್ತಿದೆ: ಡಿಕೆ.ಶಿವಕುಮಾರ್
ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿಲ್ಲ. ಆದರೆ, ನೈಸರ್ಗಿಕ ಹರಿವು ನಿಯಂತ್ರಿಸಲಾಗದ ಕಾರಣ ನೆರೆ ರಾಜ್ಯಕ್ಕೆ ನಿತ್ಯ 6,500 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
Published: 02nd October 2023 09:17 AM | Last Updated: 02nd October 2023 01:29 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿಲ್ಲ. ಆದರೆ, ನೈಸರ್ಗಿಕ ಹರಿವು ನಿಯಂತ್ರಿಸಲಾಗದ ಕಾರಣ ನೆರೆ ರಾಜ್ಯಕ್ಕೆ ನಿತ್ಯ 6,500 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ಎಸ್ ಜಲಾಶಯದಲ್ಲಿ ಒಳಹರಿವು ಹೆಚ್ಚಿದ್ದು, ಇದೀಗ 15,000 ಕ್ಯೂಸೆಕ್ ನೀರಿದೆ ಇದೆ. ಇದು ನಮಗೆ ಸ್ವಲ್ಪ ಸಮಾಧಾನ ತಂದಿದೆ. ಒಳಹರಿವು ಇನ್ನೂ ಹೆಚ್ಚಾಗಬೇಕಿದ್ದು, ಉತ್ತಮ ಮಳೆಯಾಗಲಿ ಎಂದು ಎಲ್ಲರೂ ಪ್ರಾರ್ಥಿಸಬೇಕು. ಒಳಹರಿವು ಹೆಚ್ಚಾದರೆ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿ ವಿವಾದ ಬೆನ್ನಲ್ಲೇ ಕೊಡಗಿನಲ್ಲಿ 2 ದಿನಗಳಿಂದ ಬಿರುಸಿನ ಮಳೆ: ತಗ್ಗಿದ ಆತಂಕ
ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಬಿಡುಗಡೆ ಮಾಡಿಲ್ಲ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ತಮಿಳುನಾಡಿಗೆ ಉತ್ತಮ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದಾಗಲೆಲ್ಲ ನೆರೆ ರಾಜ್ಯಕ್ಕೆ ಹರಿಯುವ ಅನಿಯಂತ್ರಿತ ನೀರು ಇದಾಗಿದೆ. ತಮಿಳುನಾಡಿಗೆ 6,500 ಕ್ಯೂಸೆಕ್ ಹರಿದು ಹೋಗುತ್ತಿದೆ. ಈ ನೈಸರ್ಗಿಕ ಹರಿವಾಗಿದ್ದು, ಇದೇ ನಮಗೆ ಶಕ್ತಿಯನ್ನು ನೀಡಿದೆ. ಬೆಳೆದ ಬೆಳೆ ಉಳಿಸಿಕೊಳ್ಳಲು ರೈತರಿಗೆ ನೀರು ಬಿಟ್ಟಿದ್ದೇವೆ. ಆದರೂ ರಾಜ್ಯ ಸರ್ಕಾರದ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.