ಬೈಕ್‌ಗಳು ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಒಂದೇ ಕುಟುಂಬದ ಮೂವರು ಯುವಕರು, ಲಾರಿ ಹರಿದು ಸಾವು!
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿ ಶನಿವಾರ ತಡರಾತ್ರಿ ಅರಹತೋಳಲು-ಮಾರಶೆಟ್ಟಿಹಳ್ಳಿ ರಸ್ತೆಯಲ್ಲಿ ಬೈಕ್‌ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಒಂದೇ ಕುಟುಂಬದ ಮೂವರು ಯುವಕರ ಮೇಲೆ ಲಾರಿ ಹರಿದಿರುವ ದಾರುಣ ಘಟನೆ ನಡೆದಿದೆ.
Published: 02nd October 2023 10:43 AM | Last Updated: 02nd October 2023 10:43 AM | A+A A-

ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿ ಶನಿವಾರ ತಡರಾತ್ರಿ ಅರಹತೋಳಲು-ಮಾರಶೆಟ್ಟಿಹಳ್ಳಿ ರಸ್ತೆಯಲ್ಲಿ ಬೈಕ್‌ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಒಂದೇ ಕುಟುಂಬದ ಮೂವರು ಯುವಕರ ಮೇಲೆ ಲಾರಿ ಹರಿದಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಶಶಾಂಕ್ (17), ಯಶವಂತ್ (17) ಮತ್ತು ವಿಕಾಸ್ (18) ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ಜಂಬರಘಟ್ಟ ಮೂಲದವರು.
ಅಪಘಾತದಲ್ಲಿ ಮತ್ತೊಬ್ಬ ಬೈಕ್ ಸವಾರ ಗಗನ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಶಾಂಕ್ ಮತ್ತು ಯಶವಂತ್ ಹೊಳೆಹೊನ್ನೂರಿನ ಸಿದ್ದೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಾಗಿದ್ದು, ವಿಕಾಸ್ ಕಳ್ಳಿಹಾಳ್ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದರು.
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಕೋಡಿಹಳ್ಳಿಯಿಂದ ಮನೆಗೆ ಮರಳುತ್ತಿದ್ದ ಸಂತ್ರಸ್ತರು ತ್ರಿಬಲ್ ರೈಡಿಂಗ್ ಮಾಡುತ್ತಿದ್ದರು. ಮರದ ದಿಮ್ಮಿ ತುಂಬಿದ್ದ ಲಾರಿಯನ್ನು ಓವರ್‌ಟೇಕ್ ಮಾಡುವಾಗ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಲಾರಿ ಅವರ ಮೇಲೆ ಹರಿದಿದ್ದು, ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಹೊಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕನಿಗಾಗಿ ಶೋಧ ನಡೆಸಿದ್ದಾರೆ.