ಮೈಸೂರು ದಸರಾ 2023: ಫೋಸ್ಟರ್, ವೆಬ್ ಸೈಟ್ ಬಿಡುಗಡೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ. ಇಂದು ದಸರಾ ಸಾಂಸ್ಕೃತಿಕ ಉಪಸಮಿತಿಯಿಂದ ಪೋಸ್ಟರ್ ಬಿಡುಗಡೆ, ದಸರಾ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು. 
ಮೈಸೂರು ದಸರಾ ಲೋಗೊ ಬಿಡುಗಡೆ ಮಾಡಿದ ಸಚಿವರಾದ ಹೆಚ್ . ಸಿ. ಮಹಾದೇವಪ್ಪ, ಶಿವರಾಜ್ ತಂಗಡಗಿ ಮತ್ತಿತರರು
ಮೈಸೂರು ದಸರಾ ಲೋಗೊ ಬಿಡುಗಡೆ ಮಾಡಿದ ಸಚಿವರಾದ ಹೆಚ್ . ಸಿ. ಮಹಾದೇವಪ್ಪ, ಶಿವರಾಜ್ ತಂಗಡಗಿ ಮತ್ತಿತರರು

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ. ಮಳೆ ಕೊರತೆ ಹಾಗೂ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಂತ ಸರಳವೂ ಹಾಗೂ ಅದ್ದೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾವನ್ನು ಆಚರಿಸುತ್ತಿದ್ದು, ಇಂದು ದಸರಾ ಸಾಂಸ್ಕೃತಿಕ ಉಪಸಮಿತಿಯಿಂದ ಪೋಸ್ಟರ್ ಬಿಡುಗಡೆ, ದಸರಾ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು. 

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮತ್ತಿತರರು ಫೋಸ್ಟರ್ ಹಾಗೂ ದಸರಾ ವೆಬ್ ಸೈಟ್ ಬಿಡುಗಡೆಗೊಳಿಸಿದರು. 

ಅರಮನೆ ಮಂಡಳಿಯಲ್ಲಿ ಹಮ್ಮಿಕೊಂಡಿದ್ದ ದಸರಾ ಉಪ ಸಮಿತಿಗಳ ಸಭೆಯಲ್ಲಿ ಮಾತನಾಡಿದ  ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ. ಮಹಾದೇವಪ್ಪ, ಈಗಾಗಲೇ 18 ವಿವಿಧ ದಸರಾ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಈ ಬಾರಿ ಹಿಂದಿನ ಅರಮನೆಯ ವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ 250 (ಸೆರಮೊನಿ ಡ್ರೆಸ್) ಸಮವಸ್ತ್ರಗಳಿಗಾಗಿ ಟೆಂಡರ್ ಕರೆಯಲಾಗಿದೆ.  ಜಿಲ್ಲಾಮಟ್ಟದಲ್ಲಿ ರೈತ ದಸರಾವನ್ನು ಆಯೋಜಿಸಿ. ರೈತ ದಸರಾದಲ್ಲಿ ರೈತರಿಗೆ ಉಪಯೋಗವಾಗುವ ಮಣ್ಣಿನ ಫಲವತ್ತತೆ, ಮಿಶ್ರ ಬೆಳೆ, ಪರ್ಯಾಯ ಬೆಳೆ ಹಾಗೂ ಆರ್ಥಿಕ ಅಭಿವೃದ್ಧಿ, ಜಿಡಿಪಿ ಮುಂತಾದ ವಿಚಾರಗಳನ್ನು ಒಳಗೊಂಡ ವಿಚಾರ ಸಂಕಿರಣಗಳನ್ನು ಆಯೋಜಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
 
ಸಾಂಸ್ಕೃತಿಕ, ಕ್ರೀಡಾ,  ಲಲಿತಕಲಾ, ಕವಿಗೋಷ್ಠಿ, ಗ್ರಾಮೀಣ ದಸರಾ, ಯೋಗಾದಸರಾ ಮಹಿಳಾ ಹಾಗೂ ಮಕ್ಕಳ ದಸರಾ, ಆಹಾರ ಮೇಳ ಚಲನ ಚಿತ್ರೋತ್ಸವ, ಯುವ ಸಂಭ್ರಮ ಹಾಗೂ ಯುವ ದಸರಾ ಸೇರಿದಂತೆ ವಿವಿಧ ದಸರಾ ಉಪ ಸಮಿತಿಗಳ ಅಧಿಕಾರಿಗಳು ಹಾಗೂ ಸದಸ್ಯರೊಟ್ಟಿಗೆ ಚರ್ಚಿಸಿದರು.

ನಂತರ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳ ಸಿದ್ಧತೆ ಸಂಬಂಧ ವಿವಿಧ ಜಿಲ್ಲೆಗಳ ನೋಡೆಲ್ ಅಧಿಕಾರಿಗಳು ಹಾಗೂ ಕಲಾವಿದರೊಂದಿಗೆ  ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಸಮಾಜದ ಪರಿವರ್ತನೆ ಅನುಕೂಲವಾಗುವಂಥ ಪರಿಕಲ್ಪನೆ ಅಡಿಯಲ್ಲಿ ಸ್ತಬ್ಧಚಿತ್ರಗಳನ್ನು ರೂಪಿಸಿ ಎಂದು ಸಲಹೆ ನೀಡಿದರು. 

ನಾರಾಯಣ ಗುರು ಸಮಾನತೆಗಾಗಿ ಶ್ರಮಿಸಿದರು. ದೇಶದಲ್ಲೇ ಮೊದಲು ಮಹಿಳೆಯರಿಗೆ ಶಿಕ್ಷಣವನ್ನು ಸಾವಿತ್ರಿ ಬಾಯಿ ಫುಲೆ ನೀಡಿದರು. ಸಮೃದ್ಧ ಭಾರತ ನಿರ್ಮಾಣಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಕ್ಷಣ, ನೀರಾವರಿ, ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿ ಸಾಮಾಜಿಕ ನ್ಯಾಯದ ಪರ ಆಡಳಿತ ನಡೆಸಿದರು‌. ಹೀಗೆ ದೇಶದ ಹಲವಾರು ಮಹಾನ್ ಸಮಾಜ ಸುಧಾರಕರ ಬದುಕು, ಹೋರಾಟವನ್ನು ತಿಳಿಸಿಕೊಡುವ ಕೆಲಸವಾಗಬೇಕು ಎಂದರು.  

ಪ್ರತಿ ಜಿಲ್ಲೆಗೆ ಅದರದೇ ಆದಂತಹ ಐತಿಹಾಸಿಕ ಘಟನೆಗಳು ಇರುತ್ತವೆ. ವಿಭಿನ್ನ ಆಚಾರ, ವಿಚಾರಗಳು, ಕಲೆ, ಸಂಸ್ಕೃತಿಗಳನ್ನು ಒಳಗೊಂಡಿರುತ್ತವೆ. ಐತಿಹಾಸಿಕ ಮಾಹಿತಿ ಜೊತೆಗೆ ಜೀವಂತವಾಗಿ ನಡೆದಿರುವಂತೆ ಘಟನೆಗಳನ್ನು ಬಿಂಬಿಸುವ ಶಿಸ್ತುಬದ್ಧ ಎಲ್ಲರ ಕಣ್ಮನ ಸೆಳೆಯುವ ಕಲಾಕೃತಿ ಒಳಗೊಂಡಿರಲಿ ಎಂದು ತಿಳಿಸಿದರು. 

ಸ್ತಬ್ಧಚಿತ್ರದ ಜೊತೆಗೆ ಆಯಾ ಜಿಲ್ಲೆಯ ಕಲಾತಂಡಗಳನ್ನು ನಿಯೋಜಿಸುವುದು. ಅಕ್ಕಪಕ್ಕದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಇರಬೇಕು. ಅನವಶ್ಯಕವಾಗಿ ಯಾರಿಗೂ ಅವಕಾಶ ನೀಡಬಾರದು. ಸ್ತಬ್ಧಚಿತ್ರದ ಅಳತೆಯಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಾಸ ಇರಬಾರದು. ಅಗಲ, ಎತ್ತರ, ಉದ್ದವು ಜಿಲ್ಲಾಡಳಿತ ನಿಗದಿಪಡಿಸಿದ ಅಳತೆಯನ್ನು  ಮೀರಬಾರದು ಎಂದು ಸೂಚಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com