ಅತ್ತಿಬೆಲೆ ಪಟಾಕಿ ಅಗ್ನಿ ಅವಘಡ: ಶಿಕ್ಷಣ, ಕುಟುಂಬ ನಿರ್ವಹಣೆಗಾಗಿ ಕೂಲಿಗೆ ಬಂದವರು ದುರಂತ ಅಂತ್ಯ!

ಅತ್ತಿಬೆಲೆ ಪಟಾಕಿ ಸಿಡಿತ ದುರಂತದಲ್ಲಿ ಮೃತಪಟ್ಟವರಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಕರುಣಾಜನಕ ಕಥೆಯಾಗಿದೆ. ದುರಂತದಲ್ಲಿ ಮೃತಪಟ್ಟ ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಗಾಗಿ ರಜೆ ಇದ್ದುದ್ದರಿಂದ ಅರೆಕಾಲಿಕ ಕೆಲಸ ಮಾಡಲು ದಿನಗೂಲಿ ಕೆಲಸಕ್ಕೆ ಸೇರಿದ್ದರು. ಆದರೆ, ಅಗ್ನಿ ಅವಘಡದಲ್ಲಿ ಅಂತ್ಯ ಕಂಡಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ದಳ ಇರುವುದು.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ದಳ ಇರುವುದು.
Updated on

ಬೆಂಗಳೂರು: ಅತ್ತಿಬೆಲೆ ಪಟಾಕಿ ಸಿಡಿತ ದುರಂತದಲ್ಲಿ ಮೃತಪಟ್ಟವರಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಕರುಣಾಜನಕ ಕಥೆಯಾಗಿದೆ. ದುರಂತದಲ್ಲಿ ಮೃತಪಟ್ಟ ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಗಾಗಿ ರಜೆ ಇದ್ದುದ್ದರಿಂದ ಅರೆಕಾಲಿಕ ಕೆಲಸ ಮಾಡಲು ದಿನಗೂಲಿ ಕೆಲಸಕ್ಕೆ ಸೇರಿದ್ದರು. ಆದರೆ, ಅಗ್ನಿ ಅವಘಡದಲ್ಲಿ ಅಂತ್ಯ ಕಂಡಿದ್ದಾರೆ.

ತಮಿಳುನಾಡಿನ ಯುವಕರು ಹಾಗೂ ಪಟಾಕಿ ತಯಾರಿಕೆಯಲ್ಲಿ ಪಳಗಿದವರನ್ನು ಅಂಗಡಿಯಲ್ಲಿ ದಿನಕ್ಕೆ ರೂ.600 ಕೂಲಿಗೆ ಕರೆ ತರಲಾಗಿತ್ತು.

ಕುಟುಂಬಗಳಿಗೆ ಆಧಾರ ಸ್ತಂಭವಾಗಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಕ್ಸ್ ಫರ್ಡ್ ಆಸ್ಪತ್ರೆ ಬಳಿ ಮೃತರ ಕುಟುಂಬದವರ ಕಣ್ಣೀರ ಕಥೆ ಮನಕಲಕುವಂತಿತ್ತು. ಪಟಾಕಿ ಮಳಿಗೆಯ ಮಾಲೀಕಿನ ವಿರುದ್ಧ ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಘಟನೆಯಲ್ಲಿ ಮೃತಪಟ್ಟಿರುವ 14 ಮಂದಿ ಯುವಕರಲ್ಲಿ ಏಳು ಮಂದಿ ಸಂಬಂಧಿಗಳಾಗಿದ್ದು, ಎಲ್ಲರೂ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹರೂರ್ ತಾಲೂಕಿನ ಟಿ ಅಮ್ಮಾಪೇಟ್ಟೈ ಗ್ರಾಮದವರಾಗಿದ್ದಾರೆ. ಅವರ ಪೋಷಕರು ಕೃಷಿ ಕಾರ್ಮಿಕರಾಗಿದ್ದು, ದಿನಕ್ಕೆ 100-200 ರೂ.ಗಳನ್ನು ಗಳಿಸುತ್ತಿದ್ದಾರೆ.

ದೀಪಾವಳಿ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪಟಾಕಿಗಳ ಸಂಗ್ರಹ ಮಾಡಲು ಯುವಕರನ್ನು ದಿನಗೂಲಿಗೆ ಕರೆತರಲಾಗಿತ್ತು.

ಮೃತರಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಯುವಕನೋರ್ವ ಇದ್ದರೆ, ಪದವಿ ವ್ಯಾಸಾಂಗ ಮಾಡುತ್ತಿರುವ ಹಲವು ಯುವಕರಿದ್ದರು. ದಿನಗೂಲಿ ಕೆಲಸಕ್ಕೆ ದಿನಕ್ಕೆ ರೂ.600 ಸಿಗಲಿದೆ ಎಂದು ಕೆಲವರು ಕಾಲೇಜಿ ರಜೆ ಹಾಕಿ ಕೆಲಸಕ್ಕೆ ಸೇರಿದ್ದರು.

ಪ್ರತಿ ಪಟಾಕಿ ಬಾಕ್ಸ್ ಪ್ಯಾಕಿಂಗ್'ಗೆ ಯುವಕರಿಗೆ ರೂ.6 ನೀಡಲಾಗಿತ್ತು. ಇದರಂತೆ ದಿನಕ್ಕೆ ರೂ.600ಗಳನ್ನು ಪಡೆಯುತ್ತಿದ್ದರು. ಜೊತೆಗೆ ಯುವಕರಿಗೆ ಉಚಿತ ಊಟ ಹಾಗೂ ವಸತಿಯನ್ನು ನೀಡಲಾಗಿತ್ತು ಎಂದು ತಿಳಿದುಬಂದಿದೆ.

ದೀಪಾವಳಿ ಸಂದರ್ಭದಲ್ಲಿ ಕೃಷ್ಣಗಿರಿ, ಸೇಲಂ, ಧರ್ಮಪುರಿ ಮತ್ತು ತಿರುವಣ್ಣಾಮಲೈ ಜಿಲ್ಲೆಗಳ ಗ್ರಾಮಗಳ ಯುವಕರು ನೂರಾರು ಪಟಾಕಿ ಅಂಗಡಿಗಳಿರುವ ಕರ್ನಾಟಕ-ತಮಿಳುನಾಡು ಗಡಿ ಪ್ರದೇಶಕ್ಕೆ ಬಂದು ಕೂಲಿ ಕೆಲಸಕ್ಕೆ ಸೇರುವುದು ಸಾಮಾನ್ಯವಾಗಿದೆ.

ನಮ್ಮ ಮಕ್ಕಳು ಇಲ್ಲಿ ಕೆಲಸ ಮಾಡುತ್ತಿರುವ ವಿಚಾರ ನಮಗಷ್ಟೇ ತಿಳಿದಿತ್ತು. ದುರಂತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅತ್ತಿಬೆಲೆಗೆ ಬಂದಿದ್ದೆವು. ಆದರೆ, ನಾವು ಬರುವಷ್ಟರದಲ್ಲಿ ಮಕ್ಕಳ ಮೃತದೇಹಗಳನ್ನು ಹೊರಗೆ ತರಲಾಗುತ್ತಿತ್ತು ಎಂದು ಯುವಕರ ಪೋಷಕರು ಕಣ್ಣೀರು ಹಾಕಿದ್ದಾರೆ.

ಯಾರದೋ ತಪ್ಪಿಗೆ ಅಮಾಯಕ ಜೀವಗಳು ಬಲಿಯಾಗಿವೆ. ಇದನ್ನು ಯಾರು ಸರಿದೂಗಿಸುತ್ತಾರೆ. ಸಹಾನುಭೂತಿಯ ಆಧಾರದ ಮೇಲೆ ತಮಿಳುನಾಡು ಹಾಗೂ ಕರ್ನಾಟಕದ ಸರ್ಕಾರಗಳು ಮೃತ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com