ಮೈಸೂರು: ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ, 20 ಮಂದಿಗೆ ಗಾಯ
ಮೈಸೂರು: ತಮಿಳುನಾಡಿನ ಖಾಸಗಿ ಬಸ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸುಮಾರು 20 ಪ್ರಯಾಣಿಕರು ಗಾಯಗೊಂಡ ಘಟನೆ ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಶುಕ್ರವಾರ ನಡೆದಿದೆ.
ಜಂಕ್ಷನ್‌ನಲ್ಲಿ ಸಿಇಎಸ್‌ಸಿ ವತಿಯಿಂದ ದಸರಾ ಸ್ವಾಗತ ದೀಪಾಲಂಕಾರಕ್ಕೆ ನಿರ್ಮಿಸಲಾಗಿದ್ದ ಕಬ್ಬಿಣದ ಕಂಬಕ್ಕೆ ಬಸ್‌ನೊಂದು ಡಿಕ್ಕಿ ಹೊಡೆದು ನಂತರ ಎದುರಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಮೈಸೂರು ಉಪನಗರ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ತೆರಳುತ್ತಿದ್ದರೆ ತಮಿಳುನಾಡು ನೋಂದಣಿ ಬಸ್ ಹೊರವರ್ತುಲ ರಸ್ತೆಯಲ್ಲಿ ಸಂಚರಿಸುತ್ತಿತ್ತು. ಬಸ್‌ಗಳ ಮೇಲೆ ಅಟ್ಟಣಿಗೆ ಕುಸಿದಿದೆ. ಘಟನೆಯಲ್ಲಿ ಡಿಕ್ಕಿಯಿಂದಾಗಿ ತಮಿಳುನಾಡು ಬಸ್‌ನಲ್ಲಿದ್ದ ಒಂಬತ್ತು ಪ್ರಯಾಣಿಕರು ಮತ್ತು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ 11 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಣಿಪಾಲ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಕೂಡಲೇ ಡಿಸ್ಚಾರ್ಜ್ ಆಗಿದ್ದಾರೆ. ಈ ಸಂಬಂಧ ಎನ್‌ಆರ್ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎರಡೂ ಬಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ