ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ದೇವಸ್ಥಾನದ ಎದುರು ಕುರಿ ಕಡಿಯುತ್ತಿದ್ದ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸೀಗಹಳ್ಳಿಯ ಪಟಾಲಮ್ಮ ದೇವಿ ಹಾಗೂ ಸಫಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಕೆಲವರು ಕುರಿ, ಹತ್ತಾರು ಕೋಳಿಗಳನ್ನು ತಂದಿರುವ ಮಾಹಿತಿ ಪ್ರಾಣಿ ಹಕ್ಕು ಹೋರಾಟಗಾರ ಕೆ.ಬಿ. ಹರೀಶ್ ಅವರಿಗೆ ಸಿಕ್ಕಿದೆ. ಆದಾದ ಕೆಲವೇ ನಿಮಿಷಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕುರಿಗಳನ್ನು ಬಲಿ ನೀಡುತ್ತಿರುವ ವೀಡಿಯೊವನ್ನು ಅವರು ಪಡೆದಿದ್ದು, ಅದನ್ನು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ನಂತರ ಅವರು ಸ್ಥಳೀಯ ಪೊಲೀಸರು ಮತ್ತು ಪಶು ಸಂಗೋಪನಾ ಇಲಾಖೆಗೆ ಶೇರ್ ಮಾಡಿದ್ದಾರೆ.
ಅಧಿಕಾರಿಗಳಿಗೆ ಸುದ್ದಿಮುಟ್ಟಿಸಿದ ನಂತರ ಪೊಲೀಸ್ ತಂಡವೊಂದನ್ನು ಸ್ಥಳಕ್ಕೆ ಕಳುಹಿಸಿ ಬಾಬು, ಮುನಿಕೃಷ್ಣ ಮತ್ತು ಮುನಿರಾಜು ಎಂಬುವರ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960, ಕರ್ನಾಟಕ ಪ್ರಾಣಿ ಬಲಿ ತಡೆ ಕಾಯ್ದೆ, 1959 ಮತ್ತು ಐಪಿಸಿ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹರೀಶ್ ಹೇಳಿದರು.
ದಸರಾ ಅಂಗವಾಗಿ ಗ್ರಾಮೋತ್ಸವ ಏರ್ಪಡಿಸಿ ಕುರಿ ಬಲಿ ನೀಡಲಾಗಿದ್ದು, ಮೂವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕಾಡುಗುಡಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಠಾಣೆಗೆ ಬಂದು ಪ್ರಾಥಮಿಕ ತನಿಖೆ ಎದುರಿಸಿದ್ದು, ಶುಕ್ರವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಅವರು ತಿಳಿಸಿದರು.
Advertisement