ಸ್ಫೋಟ ನಂತರದ ದೃಶ್ಯ
ಸ್ಫೋಟ ನಂತರದ ದೃಶ್ಯ

ಕೇರಳದ ಎರ್ನಾಕುಲಂ ಬಳಿ ಐಇಡಿ ಸಾಧನದಿಂದ ಸ್ಫೋಟ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೈ ಅಲರ್ಟ್

ಕೇರಳದ ಎರ್ನಾಕುಲಂನಲ್ಲಿ ಕ್ರಿಸ್ತಿಯನ್ ಸಮುದಾಯವನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ ಸಂಭವಿಸಿ ಓರ್ವ ನಾಗರಿಕ ಮೃತಪಟ್ಟು 36 ಜನರು ಗಾಯಗೊಂಡಿರುವ ಭೀಕರ ಘಟನೆ ನಂತರ ಗೃಹ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.
Published on

ಬೆಂಗಳೂರು/ನವದೆಹಲಿ: ಕೇರಳದ ಎರ್ನಾಕುಲಂನಲ್ಲಿ ಕ್ರಿಸ್ತಿಯನ್ ಸಮುದಾಯವನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ ಸಂಭವಿಸಿ ಓರ್ವ ನಾಗರಿಕ ಮೃತಪಟ್ಟು 36 ಜನರು ಗಾಯಗೊಂಡಿರುವ ಭೀಕರ ಘಟನೆ ನಂತರ ಗೃಹ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.

ಕೇರಳ ಬ್ಲಾಸ್ಟ್​ ಬಳಿಕ ದೆಹಲಿ ಪೊಲೀಸರು ಅಲರ್ಟ್​  ಆಗಿದ್ದು ರಾಜಧಾನಿಯಲ್ಲಿ  ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ. ದೆಹಲಿಯ ಎಲ್ಲಾ ಪ್ರದೇಶದಲ್ಲಿ ಹದ್ದಿನ ಕಣ್ಣಿರಿಸಲಾಗಿದೆ.ದೇಶದ ಯಾವುದೇ ಭಾಗದಲ್ಲಿಯಾದರೂ ಇಂತಹ ಸ್ಫೋಟ ನಡೆಯಬಹುದು ಎಂಬ ಆತಂಕದಿಂದ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.

'ಕರ್ನಾಟಕ'ದಲ್ಲೂ 'ಹೈ ಅಲರ್ಟ್' ಘೋಷಣೆ: ಕೇರಳದ ಕಲಮಸ್ಸೆರಿಯಲ್ಲಿರುವ ಕನ್ವೆನ್ಷನ್ ಸೆಂಟರ್ನಲ್ಲಿ ಸ್ಫೋಟದ ನಂತರ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಜನದಟ್ಟಣೆಯ ಪ್ರದೇಶಗಳಲ್ಲಿ ಅಧಿಕಾರಿಗಳು ಪೊಲೀಸರ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ದೆಹಲಿ ಅಲ್ಲದೇ ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.ಕೇರಳ ಸರಣಿ ಸ್ಪೋಟಕದ ನಂತ್ರ ಕರ್ನಾಟಕದಲ್ಲಿನ ಜನ ನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ಹಾಗೂ ಸೂಕ್ತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸೂಚಿಸಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಪೊಲೀಸರು ಕೇರಳ ಸರಣಿ ಸ್ಪೋಟದ ನಂತ್ರ ಮುನ್ನೆಚ್ಚರಿಕೆ ಕ್ರಮವಾಗಿ ಹದ್ದಿನ ಕಣ್ಣು ನೆಟ್ಟಿದ್ದಾರೆ. ಕರ್ನಾಟಕದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಿಗಿ ಪೊಲೀಸ್ ಭದ್ರತೆಯನ್ನು ಕೂಡ ಹೆಚ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಮಹಾರಾಷ್ಟ್ರದ ಅಧಿಕಾರಿಗಳು ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಿದ್ದಾರೆ. ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಜನನಿಬಿಡ ಸ್ಥಳಗಳಲ್ಲಿ ಅವುಗಳನ್ನು ಜಾರಿಗೆ ತಂದಿದ್ದಾರೆ. ಏತನ್ಮಧ್ಯೆ, ತಮಿಳುನಾಡಿನ ಗಡಿ ಜಿಲ್ಲೆಗಳಲ್ಲಿ ತೀವ್ರ ಕಣ್ಗಾವಲು ನಡೆಸುವಂತೆ ಡಿಜಿಪಿ ಶಂಕರ್ ಜಿವಾಲ್ ಆದೇಶಿಸಿದ್ದಾರೆ.

ಕೇರಳದ ಕೊಚ್ಚಿ ಬಳಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಸಂಭವಿಸಿದ ಸ್ಫೋಟವು ಸುಧಾರಿತ ಸ್ಫೋಟಕ ಸಾಧನದಿಂದಾಗಿ ಒಂದು ಜೀವವನ್ನು ಬಲಿ ತೆಗೆದುಕೊಂಡಿದ್ದು, 36 ಮಂದಿ ಗಾಯಗೊಂಡರು ಎಂದು ರಾಜ್ಯ ಡಿಜಿಪಿ ಶೇಕ್ ದರ್ವೇಶ್ ಸಾಹೇಬ್ ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಐಇಡಿಯಿಂದ ಸ್ಫೋಟ ಸಂಭವಿಸಿದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರು ಸುದ್ದಿಗಾರರಿಗೆ ತಿಳಿಸಿದ್ದು, ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಇಂದು ಬೆಳಿಗ್ಗೆ 9.40 ರ ಸುಮಾರಿಗೆ, ಕಲಮಸ್ಸೆರಿಯ ಜಮ್ರಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಸ್ಫೋಟ ಸಂಭವಿಸಿದೆ, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮಾಹಿತಿಯ ಪ್ರಕಾರ 36 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಜಿಪಿ ಹೇಳಿದರು. ಇದು ಭಯೋತ್ಪಾದನಾ ದಾಳಿಯೇ ಎಂಬ ಪ್ರಶ್ನೆಗೆ, ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಡಿಜಿಪಿ ಹೇಳಿದರು.

ತನಿಖೆಯ ನಂತರವೇ ನಾನು ವಿವರಗಳನ್ನು ದೃಢೀಕರಿಸಬಲ್ಲೆ. ನಾವು ಎಲ್ಲಾ ಕೋನಗಳನ್ನು ಪರಿಶೀಲಿಸುತ್ತಿದ್ದೇವೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ನಾವು ಪತ್ತೆ ಮಾಡುತ್ತೇವೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com