ಜಗಳೂರು: ಅಶ್ಲೀಲ ವಿಡಿಯೊ ಬೆದರಿಕೆ; ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು
ಅಶ್ಲೀಲ ವಿಡಿಯೊ ಹರಿಬಿಡುವುದಾಗಿ ಯುವಕರಿಬ್ಬರು ಬೆದರಿಕೆ ಹಾಕಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿಯೊಬ್ಬಳು (17), ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವ ಘಟನೆ ನಡೆದಿದೆ.
Published: 06th September 2023 10:51 AM | Last Updated: 06th September 2023 10:51 AM | A+A A-

ಸಾಂದರ್ಭಿಕ ಚಿತ್ರ
ಜಗಳೂರು: ಅಶ್ಲೀಲ ವಿಡಿಯೊ ಹರಿಬಿಡುವುದಾಗಿ ಯುವಕರಿಬ್ಬರು ಬೆದರಿಕೆ ಹಾಕಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿಯೊಬ್ಬಳು (17), ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವ ಘಟನೆ ನಡೆದಿದೆ.
ಜಗಳೂರು ತಾಲೂಕಿನ ಪಿಯು ವಿದ್ಯಾರ್ಥಿನಿಯನ್ನು ಇಬ್ಬರು ವಿದ್ಯಾರ್ಥಿಗಳು ಬ್ಲಾಕ್‌ಮೇಲ್ ಮಾಡಿದ್ದರು, ಇದರಿಂದ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು, ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಬಾಲಕಿ ವಿಡಿಯೋ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಲ್ಲೂಕಿನ ಗ್ರಾಮವೊಂದರ ಈ ವಿದ್ಯಾರ್ಥಿನಿ ಇದ್ದ ವಿಡಿಯೊ ಹರಿಬಿಡುವುದಾಗಿ ಬೆದರಿಸಿದ್ದ ತಾಲ್ಲೂಕಿನ ಮಧು ಮತ್ತು ನಾಗೇಂದ್ರಸ್ವಾಮಿ ಎಂಬ ಯುವಕರ ವಿರುದ್ಧ ಜಗಳೂರು ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಇದನ್ನೂ ಓದಿ: ಪತ್ನಿಯ ಅಂತ್ಯಕ್ರಿಯೆ ನೆರವೇರಿಸಿ ಬಂದ ಪತಿಗೆ ಶಾಕ್: ಮನೆಯಲ್ಲಿದ್ದ ಚಿನ್ನಾಭರಣಗಳು ಕಳವು
ಮಗಳು ಪ್ರತಿದಿನ ಗ್ರಾಮದಿಂದ ಪಟ್ಟಣದ ಕಾಲೇಜಿಗೆ ಹೋಗುತ್ತಿದ್ದಾಗ ಇಬ್ಬರು ಯುವಕರ ಪರಿಚಯವಾಗಿತ್ತು. ಅದನ್ನು ದುರ್ಬಳಕೆ ಮಾಡಿಕೊಂಡ ಅವರು ವಾರದ ಹಿಂದೆ ಬೇಕರಿ ತಿನಿಸಿನಲ್ಲಿ ಮತ್ತು ಬರಿಸುವ ವಸ್ತುವನ್ನು ಸೇರಿಸಿ ತಿನ್ನಲು ಕೊಟ್ಟಿದ್ದಾರೆ. ಆಕೆ ಪ್ರಜ್ಞೆ ತಪ್ಪಿದಾಗ ಮೊಬೈಲ್‌ನಿಂದ ಅಶ್ಲೀಲ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಬಿಡುವುದಾಗಿ ನಿರಂತರ ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ಮೃತ ಬಾಲಕಿಯ ಪಾಲಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಯುವಕ ನಮ್ಮ ಮನೆ ಎದುರು ಬಂದು ತನ್ನ ಜೊತೆಯಲ್ಲಿ ಬರುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಪುತ್ರಿ, ಆಗಸ್ಟ್ 28ರಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು’ ಎಂದು ದೂರಿನಲ್ಲಿ ಹೇಳಲಾಗಿದೆ.
ನನಗೆ ಆದ ಅನ್ಯಾಯ ಬೇರೆ ಯಾವುದೇ ಹೆಣ್ಣುಮಕ್ಕಳಿಗೆ ಆಗಬಾರದು. ದಯವಿಟ್ಟು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲ ದುಷ್ಟರಿಗೂ ಇದು ಪಾಠವಾಗಬೇಕು ಎಂದು ಆಸ್ಪತ್ರೆಯಲ್ಲಿದ್ದ ವಿದ್ಯಾರ್ಥಿನಿ ಕಣ್ಣೀರು ಹಾಕುತ್ತಾ ಕೈಮುಗಿದು ಬೇಡಿಕೊಳ್ಳುತ್ತಿರುವ ವಿಡಿಯೊ ಹರಿದಾಡಿದೆ.
ಇದನ್ನೂ ಓದಿ: ಹಾಸನ: ಹಣ್ಣುಗಳಲ್ಲಿ ಗಾಂಜಾ ಇರಿಸಿ ಕೈದಿಗಳಿಗೆ ಪೂರೈಕೆ, ಮೂವರ ಬಂಧನ
ಜಗಳೂರು ಪೊಲೀಸ್ ಠಾಣೆಯಲ್ಲಿ ಆಗಸ್ಟ್ 31 ರಂದು ಪೋಕ್ಸೊ ಪ್ರಕರಣ ದಾಖಲಾಗಿದೆ. ಇಬ್ಬರು ವಿದ್ಯಾರ್ಥಿಗಳು ತನಗೆ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ಆರೋಪಿಸಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.