ಹಾಸನ: ಹಣ್ಣುಗಳಲ್ಲಿ ಗಾಂಜಾ ಇರಿಸಿ ಕೈದಿಗಳಿಗೆ ಪೂರೈಕೆ, ಮೂವರ ಬಂಧನ
ಹಾಸನ ಜಿಲ್ಲೆಯಲ್ಲಿ ಹಣ್ಣುಗಳಲ್ಲಿ ಬಚ್ಚಿಟ್ಟು ಜೈಲು ಕೈದಿಗಳಿಗೆ ಗಾಂಜಾ ಪೂರೈಕೆಗೆ ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Published: 05th September 2023 03:38 PM | Last Updated: 05th September 2023 03:39 PM | A+A A-

ಪ್ರಾತಿನಿಧಿಕ ಚಿತ್ರ
ಹಾಸನ: ಜಿಲ್ಲೆಯಲ್ಲಿ ಹಣ್ಣುಗಳಲ್ಲಿ ಬಚ್ಚಿಟ್ಟು ಜೈಲು ಕೈದಿಗಳಿಗೆ ಗಾಂಜಾ ಪೂರೈಕೆಗೆ ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಂಧಿತರನ್ನು 28 ವರ್ಷದ ತಬ್ರೇಜ್, 21 ವರ್ಷದ ವಾಸಿಂ ಮತ್ತು 20 ವರ್ಷದ ರಕೀಬ್ ಎಂದು ಗುರುತಿಸಲಾಗಿದೆ. ಆರೋಪಿಗಳು ತರಕಾರಿ ಮಾರಾಟ ಮತ್ತು ಸ್ಕ್ರ್ಯಾಪ್ ವ್ಯವಹಾರ ನಡೆಸುತ್ತಿದ್ದರು.
ಆರೋಪಿಗಳು ಹಣ್ಣುಗಳಿಗೆ ರಂಧ್ರ ಮಾಡಿ ಒಳಗೆ ಗಾಂಜಾ ತುಂಬಿ ಸ್ಟಿಕ್ಕರ್ ಅಂಟಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲು ಕಟ್ಟಡದ ಹಿಂಭಾಗದಿಂದ ಜೈಲಿನ ಆವರಣಕ್ಕೆ ಗಾಂಜಾ ತುಂಬಿದ್ದ ಸೇಬು ಮತ್ತು ಮೋಸಂಬಿ ಹಣ್ಣುಗಳನ್ನು ಎಸೆಯಲು ಯತ್ನಿಸುತ್ತಿದ್ದಾಗ ಮೂವರು ಸಿಕ್ಕಿಬಿದ್ದಿದ್ದಾರೆ.
ಅನುಮಾನಾಸ್ಪದ ಓಡಾಟವನ್ನು ಗಮನಿಸಿದ ಹಾಸನ ನಗರ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡು, ಗಾಂಜಾ ತುಂಬಿದ್ದ ಮೂರು ಸೇಬು ಮತ್ತು ಎರಡು ಮೋಸಂಬಿ ಹಣ್ಣುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹಾಸನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಆಟಾಟೋಪ: ಪೊಲೀಸರ ದಿಢೀರ್ ದಾಳಿ ವೇಳೆ ಮಾದಕ ವಸ್ತು, ಮೊಬೈಲ್ ಫೋನ್ಗಳು ಪತ್ತೆ!
ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಈ ಸಂಹಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇತ್ತೀಚೆಗೆ ಹಾಸನ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ದಾಳಿಯ ವೇಳೆ ಪೊಲೀಸರು ಗಾಂಜಾ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡ ನಂತರ ನಾಲ್ವರು ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.