ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 2.25 ಕೋಟಿ ರೂ. ಪರಿಹಾರ: ಮಡಿಕೇರಿ ಕೋರ್ಟ್ ಆದೇಶ ಒಪ್ಪಿಕೊಂಡ ವಿಮಾ ಕಂಪನಿ

ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ 2.25 ಕೋಟಿ ರೂ. ಪರಿಹಾರ ನೀಡುವಂತೆ ಮಡಿಕೇರಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು ಮೋಟಾರು ಅಪಘಾತಗಳ ಕ್ಲೇಮ್ಸ್...
ಲೋಕ ಅದಾಲತ್
ಲೋಕ ಅದಾಲತ್
Updated on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ 2.25 ಕೋಟಿ ರೂ. ಪರಿಹಾರ ನೀಡುವಂತೆ ಮಡಿಕೇರಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು ಮೋಟಾರು ಅಪಘಾತಗಳ ಕ್ಲೇಮ್ಸ್ ಟ್ರಿಬ್ಯೂನಲ್(MACT) ವಿಮಾ ಕಂಪನಿಗೆ ಆದೇಶಿಸಿದೆ.

ಲೋಕ ಅದಾಲತ್ ಇತ್ಯರ್ಥದ ಸಂದರ್ಭದಲ್ಲಿ ಈ ಬಗ್ಗೆ ತೀರ್ಪು ನೀಡಲಾಗಿದ್ದು, ಪ್ರಕರಣದ ಆರೋಪಿಯ ಮೋಟಾರು ವಾಹನದ ವಿಮಾ ಕಂಪನಿಯು ಎರಡು ತಿಂಗಳಲ್ಲಿ ಪರಿಹಾರ ನೀಡಲು ಒಪ್ಪಿಕೊಂಡಿದೆ.

ಅಪಘಾತದಲ್ಲಿ ಮೃತಪಟ್ಟ ಅಚಲ್ ಬೋಪಣ್ಣ(34) ಅವರು ಕೊಡಗು ನಿವಾಸಿಯಾಗಿದ್ದು, ಹಾಂಕಾಂಗ್‌ನ ಆಂಗ್ಲೋ-ಈಸ್ಟರ್ನ್ ಶಿಪ್ ಮ್ಯಾನೇಜ್‌ಮೆಂಟ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಂಪನಿಯಲ್ಲಿ ಕ್ಯಾಪ್ಟನ್ ಆಗಿ ನೇಮಿಸಲಾಗಿತ್ತು. 2017ರ ಡಿಸೆಂಬರ್‌ನಲ್ಲಿ ಮೂಡಿಗೆರೆಯಿಂದ ಕೊಡಗು ಕಡೆಗೆ ತೆರಳುತ್ತಿದ್ದ ಅಚಲ್ ಅವರು ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದರು. ಆರೋಪಿ ಅಯ್ಯಪ್ಪ ಚಲಾಯಿಸುತ್ತಿದ್ದ ಪಿಕಪ್ ವಾಹನವು ಅಚಲ್ ಚಲಾಯಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಚಲ ಅವರು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಂತರ, ಅಚಲ್ ಅವರ ತಾಯಿ ಅನಿಲಾ ಎಜಿ ಮತ್ತು ಪತ್ನಿ ಸ್ಪೂರ್ತಿ ಅವರು ಪ್ರತಿವಾದಿಗಳಿಂದ ಪರಿಹಾರಕ್ಕಾಗಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.

ಆರೋಪಿ ಅಯ್ಯಪ್ಪ ಮತ್ತು ಆರೋಪಿಯ ಮೋಟಾರು ವಾಹನದ ವಿಮಾ ಕಂಪನಿ - ಚೋಳಮಂಡಲಂ ಜನರಲ್ ಇನ್ಶುರೆನ್ಸ್ ಕಂಪನಿ ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದರು.

2018ರಿಂದ ಮಡಿಕೇರಿಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈ ವರ್ಷ ಸೆಪ್ಟೆಂಬರ್ 9ರಂದು ನಡೆದ ಲೋಕ ಅದಾಲತ್ ನಲ್ಲಿ ಇತ್ಯರ್ಥಪಡಿಸಲಾಗಿತ್ತು. ಪರಿಹಾರಕ್ಕಾಗಿ ಎರಡು ಪ್ರಕರಣಗಳನ್ನು ಸಂಯೋಜಿಸುವಂತೆ ಪೀಠ ಸೂಚಿಸಿತ್ತು. ಅಂತೆಯೇ, ಅರ್ಜಿದಾರರಾದ ಅನಿಲಾ ಮತ್ತು ಸ್ಪೂರ್ತಿ ಅವರು 3 ಕೋಟಿ ರೂ. ಪರಿಹಾರ ಕೋರಿದ್ದರು. ಅವರ ಪರವಾಗಿ ವಕೀಲರಾದ ಬಿಬಿ ಆನಂದ್ ಮತ್ತು ರತನ್ ತಮ್ಮಯ್ಯ ಅವರು ವಾದಿಸಿದ್ದರು.

ಪ್ರಕರಣದ ವಿಚಾರಣೆಯ ನಂತರ, ನ್ಯಾಯಾಧೀಶ ಪ್ರಶಾಂತ್ ಜಿ ಅವರು ಸಂತ್ರಸ್ತೆಯ ಕುಟುಂಬಕ್ಕೆ 2.25 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಚೋಳಮಂಡಲಂ ಜನರಲ್ ಇನ್ಶುರೆನ್ಸ್ ಕಂಪನಿಗೆ ಆದೇಶಿಸಿದ್ದಾರೆ. 

“ಇದೊಂದು ಅಪರೂಪದ ಪ್ರಕರಣವಾಗಿದ್ದು, ಅಚಲ್ ಮಾಸಿಕ 4 ಲಕ್ಷ ರೂ.ವರೆಗೆ ವೇತನ ಪಡೆಯುತ್ತಿದ್ದರು. 34 ವರ್ಷಕ್ಕೆ ನಿಧನರಾದ ಅಚಲ್ ಅವರ ಉಳಿದ ಕೆಲಸದ ವರ್ಷಗಳಿಗೆ ಪರಿಹಾರದ ಮೊತ್ತವನ್ನು ಲೆಕ್ಕ ಹಾಕಲಾಯಿತು,” ಎಂದು ಪ್ರಕರಣದಲ್ಲಿ ವಿಮಾ ಕಂಪನಿಯನ್ನು ಪ್ರತಿನಿಧಿಸುವ ಬಿ.ಡಿ.ದಯಾನಂದ ಅವರು ಹೇಳಿದ್ದಾರೆ. ವಿಮಾ ಕಂಪನಿಯು ಪರಿಹಾರದ ಮೊತ್ತವನ್ನು ಎರಡು ತಿಂಗಳಲ್ಲಿ ಪಾವತಿಸಲು ಆದೇಶಿಸಲಾಗಿದೆ ಮತ್ತು ತಪ್ಪಿದರೆ ಅದಕ್ಕೆ ಬಡ್ಡಿ ಮೊತ್ತವನ್ನು ಸೇರಿಸಲಾಗುವುದು ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com