ಗಣೇಶ ಚತುರ್ಥಿ: ನಿರೀಕ್ಷಿಸಿದಷ್ಟು ಬಾರದ ಲಾಭ, ಮೂರ್ತಿ ತಯಾರಕರು, ಹೂ ಮಾರಾಟಗಾರರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ!
ಗೌರಿ-ಗಣೇಶ ಮೂರ್ತಿ ತಯಾರಕರg ಹಾಗೂ ಹೂವಿನ ವ್ಯಾಪಾರಿಗಳಿಗೆ ಈ ವರ್ಷ ನಿರೀಕ್ಷಿತ ಲಾಭ ಸಿಗದ ಕಾರಣ ಈ ವರ್ಷದ ಹಬ್ಬದ ಸೀಸನ್ ಖುಷಿ ತಂದುಕೊಟ್ಟಿಲ್ಲ.
Published: 18th September 2023 11:59 AM | Last Updated: 18th September 2023 11:59 AM | A+A A-

ಗೌರಿ-ಗಣೇಶ ಹಬ್ಬದ ಮುನ್ನಾದಿನವಾದ ಭಾನುವಾರದಂದು ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ಜನರು ಹೂವು ಮತ್ತು ಇತರ ಪೂಜಾ ಸಾಮಗ್ರಿಗಳ ಖರೀದಿಸುತ್ತಿರುವುದು.
ಬೆಂಗಳೂರು: ಗೌರಿ-ಗಣೇಶ ಮೂರ್ತಿ ತಯಾರಕರg ಹಾಗೂ ಹೂವಿನ ವ್ಯಾಪಾರಿಗಳಿಗೆ ಈ ವರ್ಷ ನಿರೀಕ್ಷಿತ ಲಾಭ ಸಿಗದ ಕಾರಣ ಈ ವರ್ಷದ ಹಬ್ಬದ ಸೀಸನ್ ಖುಷಿ ತಂದುಕೊಟ್ಟಿಲ್ಲ.
ಮಂಜುನಾಥ ಗಣೇಶ ಮತ್ತು ಗೌರಿ ವಿಗ್ರಹಗಳ ವರ್ಕ್ಸ್'ನ ಮಾಲೀಕ ಕಿರಣ್ ಬಾಲು ಎಂಬುವವರು ಮಾತನಾಡಿ, ಈ ವರ್ಷ ವಿಗ್ರಹಗಳ ಬೆಲೆ ಏರಿಕೆಯಾಗಿದ್ದರೂ, ವಿದ್ಯುತ್ ಮತ್ತು ಕಚ್ಚಾ ವಸ್ತುಗಳ ಬೆಲೆ ಹೆಚ್ಚಿರುವುದರಿಂದ ಕನಿಷ್ಠ ಲಾಭವನ್ನು ಗಳಿಸಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಾಡಿಗೆ ಮತ್ತು ಕಾರ್ಮಿಕ ವೆಚ್ಚಗಳು ಹೆಚ್ಚಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
1 ಅಡಿ ಗಣೇಶ ಮೂರ್ತಿಯ ಬೆಲೆ ದ್ವಿಗುಣಗೊಂಡಿದೆ. ರಿಟೇಲ್ ವೆಚ್ಚವನ್ನು ಶೇ.25ರಷ್ಟು ಹೆಚ್ಚಿಸಲಾಗಿದೆ. ಈ ವರ್ಷ 15,000 ಮೂರ್ತಿಗಳನ್ನು ಮಾರಾಟ ಮಾಡಲಾಗಿದೆ. ಶೇ.10ರಷ್ಟು ಲಾಭ ಗಳಿಸಲಾಗಿದೆ. ಈ ಹಿಂದೆ ಬಾಡಿಕೆ, ವಿದ್ಯುತ್, ಕಚ್ಛಾ ವಸ್ತುಗಳ ಬೆಲೆ ಮತ್ತು ಕಾರ್ಮಿಕರ ವೆಚ್ಚ ಅಗ್ಗವಾಗಿತ್ತು. ಇದರಿಂದ ಹೆಚ್ಚಿನ ಲಾಭ ಗಳಿಸಲಾಗುತ್ತಿತ್ತು. ಪಿಒಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿರುವುದರಿಂದ ಮಣ್ಣಿನ ಗಣೇಶ ಮೂರ್ತಿಗಳಿಗೆ ಭಾರೀ ಬೇಡಿಕೆಗಳು ಬಂದಿವೆ. ಆದರೂ ಸಾಂಕ್ರಾಮಿಕ ರೋಗದ ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ಬಾರಿ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿವೆ ಎಂದು ಹೇಳಿದ್ದಾರೆ.
ಈ ನಡುವೆ ಹೂವಿನ ಮಾರಾಟಗಾರರು ಕೂಡ ಈ ಬಾರಿ ನಿರೀಕ್ಷಿತ ಲಾಭವನ್ನು ಗಳಿಸಿಲ್ಲ ಎಂದು ತಿಳಿದುಬಂದಿದೆ.
ಕರ್ನಾಟಕ ಸಣ್ಣ ಹೂ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ಮುಚ್ಚಾಳ್ ಮಾತನಾಡಿ, ಈ ವರ್ಷ ಬೇಡಿಕೆ ಕಡಿಮೆಯಾಗಿದೆ. ಮದುವೆ, ಈವೆಂಟ್ ಮ್ಯಾನೇಜ್ಮೆಂಟ್ ಗಳಲ್ಲಿ ಪ್ಲಾಸ್ಟಿಕ್ ಹೂಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಅವುಗಳನ್ನು ಅನೇಕ ಬಾರಿ ಬಳಕೆ ಮಾಡಬಹುದಾದ್ದರಿಂದ ಅವುಗಳನ್ನೇ ಬಳಕೆ ಮಾಡುತ್ತಿದ್ದಾರೆ. 100 ಗುಲಾಬಿ ಹೂಗಳನ್ನು ಖರೀದಿಸುವ ಗ್ರಾಹಕ ಇಂದು 50 ಗುಲಾಬಿ ಹೂಗಳಿಗೆ ಆರ್ಡರ್ ನೀಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ದಿನಸಿ ಮಾರಾಟದಲ್ಲಿ ಕೂಡ ಇಳಿಕೆಯಾಗಿರುವುದು ಕಂಡು ಬಂದಿದೆ.