ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ: ಪಡೆಯೋದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ...

ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ (HSRP) ಅಳವಡಿಕೆ ಕಡ್ಡಾಯವಾಗಿದೆ. ಈ ನಂಬರ್ ಪ್ಲೇಟ್ ಅಳವಡಿಕೆಗೆ ಸಾರಿಗೆ ಇಲಾಖೆ ಡೆಡ್ ಲೈನ್ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ (HSRP) ಅಳವಡಿಕೆ ಕಡ್ಡಾಯವಾಗಿದೆ. ಈ ನಂಬರ್ ಪ್ಲೇಟ್ ಅಳವಡಿಕೆಗೆ ಸಾರಿಗೆ ಇಲಾಖೆ ಡೆಡ್ ಲೈನ್ ನೀಡಿದೆ.

ಹಳೆಯ ವಾಹನಗಳಿಗೆ ಪ್ಲೇಟ್ ಅಳವಡಿಕೆ ನವೆಂಬರ್ 17 ಕೊನೆಯ ದಿನವಾಗಿದೆ. ಏಪ್ರಿಲ್​ 2019 ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ.

ಸಾರಿಗೆ ಇಲಾಖೆ ಸೂಚನೆ ಬೆನ್ನಲ್ಲೇ ಸಾರ್ವಜನಿಕರಲ್ಲಿ ಹಲವು ಗೊಂದಲಗಳು ಮೂಡತೊಡಗಿದ್ದು, ಪ್ರಶ್ನೆಗಳ ಸುರಿಮಳೆಗಳನ್ನೇ ಸುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯು ನಂಬರ್ ಪ್ಲೇಟ್ ಪಡೆಯುವ ಕುರಿತು ಹಂತ ಹಂತವಾಗಿ ವಿವರಗಳನ್ನು ನೀಡಿದೆ.

ಈಗಾಗಲೇ ಹಲವರು ತಮ್ಮ ವಾಹನಗಳಿಗೆ ಹೈ- ಸೆಕ್ಯುರಿಟಿ ರಿಜಿಸ್ಟ್ರೇಶನ್‌ ಪ್ಲೇಟ್ ಅಳವಡಿಸಿಕೊಂಡಿದ್ದಾರೆ. ಇನ್ನುಳಿದವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಾರಿಗೆ ಇಲಾಖೆ ಮಾಡಲಾರಂಭಿಸಿದೆ.

ಗುಡುವು ಮುಗಿದರೂ ಹೆಚ್​ಎಸ್​ಆರ್​​ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದವರಿಗೆ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಹೆಚ್‌ಎಸ್‌ಆರ್‌ಪಿ ಎಂದರೇನು?
ಹೆಚ್‌ಎಸ್‌ಆರ್‌ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದ್ದು, ಅಲ್ಯೂಮಿನಿಯಂ ಲೋಹದಲ್ಲಿ ತಯಾರಿಸಿದ ನಂಬರ್ ಪ್ಲೇಟ್‌. ಬಳಕೆಯಿಲ್ಲದ ಎರಡು ಲಾಕ್‌ಗಳನ್ನು ಹೊಂದಿದೆ. ಮುಂಭಾಗದ ಮತ್ತು ಹಿಂಭಾಗದ ನಂಬರ್ ಪ್ಲೇಟ್‌ನ ಎಡಬದಿಯ ಮೇಲ್ತುದಿಯಲ್ಲಿ ಕ್ರೋಮಿಯಂ ಹಾಲೋಗ್ರಾಂ ಇದ್ದು, ಅದರಲ್ಲಿ ಆಶೋಕಚಕ್ರದ ಚಿತ್ರವಿದೆ. ಇದು 20 ಎಂಎಂX 20 ಎಂಎಂ ಗಾತ್ರದಲ್ಲಿ ಹಾಟ್‌ ಸ್ಟಾಂಪಿಂಗ್‌ ಮೂಲಕ ಲಗತ್ತಿಸಲಾಗುತ್ತದೆ. ನಕಲಿ ನಂಬರ್ ಪ್ಲೇಟ್ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಪಡೆಯುವುದು ಹೇಗೆ?
ಕರ್ನಾಟಕದಲ್ಲಿ ಹೆಚ್‌ಎಸ್‌ಆರ್‌ಪಿ ಅಥವಾ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ಸ್ ಅನ್ನು ಪಡೆಯಲು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್‌ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಬೇಕು. ಅಲ್ಲಿ ಬುಕ್‌ ಹೆಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಾಹನದ ಉತ್ಪಾದಕ ಕಂಪನಿಯನ್ನು ಆಯ್ಕೆ ಮಾಡಿ. ಬಳಿಕ ಅಲ್ಲಿ ಬೇಸಿಕ್ ವೆಹಿಕಲ್ ಡಿಟೇಲ್ಸ್ ಕೇಳಿರುವುದನ್ನು ಭರ್ತಿ ಮಾಡಬೇಕು. ಅದಾದ ಬಳಿಕ ಡೀಲರ್ ಲೊಕೇಶನ್‌ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೆಲೆಕ್ಟ್ ಮಾಡಿಕೊಳ್ಳಬೇಕು. ಹೆಚ್‌ಎಸ್‌ಆರ್‌ಪಿಯನ್ನು ಫಿಕ್ಸ್ ಮಾಡುವುದಕ್ಕಾಗಿ ಡೀಲರ್‌ ಲೊಕೇಶನ್ ಸೆಲೆಕ್ಟ್ ಮಾಡಬೇಕಾಗಿರುವಂಥದ್ದು. ಹೆಚ್‌ಎಸ್‌ಆರ್‌ಪಿಗೆ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ನಗದು ಪಾವತಿ ಮಾಡಬೇಕಾದ್ದಿಲ್ಲ.

ಇಷ್ಟು ಮಾಡಿದ ಬಳಿಕ ವಾಹನದ ಮಾಲೀಕರ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಮಾಲೀಕರು ತಮ್ಮ ಸಮಯಾವಕಾಶ ನೋಡಿಕೊಂಡು ನಂಬರ್ ಪ್ಲೇಟ್ ಅನ್ನು ವಾಹನಕ್ಕೆ ಜೋಡಿಸಲು ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು. ಬಳಿಕ ವಾಹನ ಮಾಲೀಕರು ನಿಗದಿ ಮಾಡಿಕೊಂಡು ಅಂಗೀಕೃತವಾದ ದಿನಾಂಕ ಮತ್ತು ಸಮಯಕ್ಕೆ ಅವರ ವಾಹನ ಉತ್ಪಾದಕರು/ ಡೀಲರ್‌ ಬಳಿ ಹೋಗಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ವಾಹನಕ್ಕೆ ಅಳವಡಿಸಬಹುದು. ಕೆಲವು ಡೀಲರ್‌ಗಳು ವಾಹನ ಮಾಲೀಕರ ಮನೆಬಾಗಿಲಿಗೆ ಈ ಸೇವೆಯನ್ನು ಒದಗಿಸಬಹುದು.

ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ಎಚ್‌ಎಸ್‌ಆರ್‌ಪಿ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಆದೇಶದ ಪ್ರಕಾರ, ವಾಹನಗಳು HSRP ನಂಬರ್ ಪ್ಲೇಟ್‌ಗಳನ್ನು ಅಳವಡಿಸಬೇಕು. ಕೇಂದ್ರ ಸರ್ಕಾರವು ಈ ಕ್ರಮದ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಬಯಸಿದೆ. ಎಚ್‌ಎಸ್‌ಆರ್‌ಪಿಯನ್ನು ಪರಿಚಯಿಸುವ ಪ್ರಮುಖ ಕಾರಣವೆಂದರೆ ಅಪರಾಧಿಗಳು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸುವ ನಕಲಿ ನೋಂದಣಿ ಸಂಖ್ಯೆಗಳನ್ನು ತಡೆಗಟ್ಟುವುದು ಮತ್ತು ಸಂಚಾರ ಉಲ್ಲಂಘನೆಗಾಗಿ ವಾಹನಗಳನ್ನು ಟ್ರ್ಯಾಕ್ ಮಾಡುವುದಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವು ಆಗಸ್ಟ್ 17, 2023 ರಂದು ಆದೇಶಗಳನ್ನು ಹೊರಡಿಸಿತ್ತು, ಆದರೆ ಇದುವರೆಗೆ ಸುಮಾರು 20,000 ಜನರು ಮಾತ್ರ ಮುಂದೆ ಬಂದು ಬದಲಾವಣೆ ಮಾಡಿಕೊಂಡಿದ್ದಾರೆ. ಜನರಲ್ಲಿ ಅರಿವು ಕಡಿಮೆಯಾಗಿದೆ, ಜನರಲ್ಲಿ ಸಾಕಷ್ಟು ಪ್ರಶ್ನೆಗಳೂ ಕೂಡ ಮೂಡತೊಡಗಿದೆ. ಜನರು ಯಾವುದೇ ಅಧಿಕೃತ ಡೀಲರ್‌ನಿಂದ ನಂಬರ್ ಪ್ಲೇಟ್ ಬದಲಾಯಿಸಬಹುದು. ತಮಗೆ ಸೂಕ್ತವಾದ ಟೈಮ್ ಸ್ಲಾಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ತಮ್ಮ ಮನೆ ಅಥವಾ ಕಚೇರಿಯಿಂದಲೂ ಮಾಡಿಕೊಳ್ಳಬಹುದು ಎಂದು ಭಾರತೀಯ ನೋಂದಣಿ ಪ್ಲೇಟ್ ತಯಾರಕರ ಸಂಘದ ಕಾರ್ಯಕಾರಿ ಸದಸ್ಯ ಮತ್ತು ವಕ್ತಾರ ಸುಧೀರ್ ಗೋಯೆಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com