ಮೈಸೂರು: ಮಹಿಳಾ ಎಸ್‌ಐ ಪುತ್ರನ ಬೈಕ್ ಸ್ಟಂಟ್ ನಿಂದ 68 ವರ್ಷದ ರೈತನ ಪ್ರಾಣಕ್ಕೆ ಕುತ್ತು, ಕ್ರಮಕ್ಕೆ ಆಗ್ರಹ
ನಂಜನಗೂಡು ತಾಲೂಕಿನ ಹಿಮ್ಮಾವು ಎಂಬಲ್ಲಿ ಶನಿವಾರ ನಂಜನಗೂಡಿನ ಮಹಿಳಾ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಮಗನ ಬೈಕ್ ಸ್ಟಂಟ್ 68 ವರ್ಷದ ರೈತನ ಪ್ರಾಣಕ್ಕೆ ಕುತ್ತು ತಂದಿದೆ.
Published: 19th September 2023 02:50 PM | Last Updated: 19th September 2023 03:12 PM | A+A A-

ಪ್ರಾತಿನಿಧಿಕ ಚಿತ್ರ
ಮೈಸೂರು: ನಂಜನಗೂಡು ತಾಲೂಕಿನ ಹಿಮ್ಮಾವು ಎಂಬಲ್ಲಿ ಶನಿವಾರ ನಂಜನಗೂಡಿನ ಮಹಿಳಾ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಮಗನ ಬೈಕ್ ಸ್ಟಂಟ್ 68 ವರ್ಷದ ರೈತನ ಪ್ರಾಣಕ್ಕೆ ಕುತ್ತು ತಂದಿದೆ.
ಇತ್ತೀಚೆಗಷ್ಟೇ ಮೈಸೂರು-ಊಟಿ ಹೆದ್ದಾರಿಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದ ನಂಜನಗೂಡು ಟ್ರಾಫಿಕ್ ಪಿಎಸ್‌ಐ ಯಾಸ್ಮೀನ್ ತಾಜ್ ಅವರ ಅಪ್ರಾಪ್ತ ಪುತ್ರನನ್ನು ಬಂಧಿಸಲಾಗಿತ್ತು ಮತ್ತು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಶನಿವಾರ ಸಂಜೆ ಹಿಮ್ಮಾವು ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಪ್ರಾಪ್ತ ತನ್ನ ಬೈಕ್‌ನಲ್ಲಿ ಮತ್ತೆ ಸ್ಟಂಟ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಏಷ್ಯನ್ ಪೇಂಟ್ಸ್ ಕಾರ್ಖಾನೆ ಬಳಿ ದನ ಮೇಯಿಸಲು ರಸ್ತೆ ಬದಿ ಕುಳಿತಿದ್ದ ಹಿಮ್ಮಾವು ನಿವಾಸಿಯಾದ ಗುರುಸ್ವಾಮಿ (68) ಮತ್ತು ಗೋವಿಂದರಾಜು (35) ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ತಲೆಗೆ ತೀವ್ರ ಪೆಟ್ಟಾದ ಗುರುಸ್ವಾಮಿ ಸ್ಥಳದಲ್ಲೇ ಮೃತಪಟ್ಟರೆ, ಗೋವಿಂದರಾಜು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯುವಕನ ವರ್ತನೆ ವಿರುದ್ಧ ಸಾರ್ವಜನಿಕರಿಂದ ದೂರು
ಅಪಘಾತವನ್ನು ಕಂಡ ಜನರು ಗುರುಸ್ವಾಮಿ, ಗೋವಿಂದರಾಜು ಮತ್ತು ಆರೋಪಿಯನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಗೋವಿಂದರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ನೌಕಾಪಡೆಯ ಮಾಜಿ ಅಧಿಕಾರಿ ಸಾವು
ಆಗಸ್ಟ್ 19ರಂದು ರಾಜೀವ್ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದ ಅಪ್ರಾಪ್ತನನ್ನು ಮೈಸೂರಿನ ಸಿದ್ಧಾರ್ಥನಗರ ಸಂಚಾರ ಪೊಲೀಸರು ಬಂಧಿಸಿದ್ದರು. ಆತನ ಬೈಕ್ ಸ್ಟಂಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅದು ವೈರಲ್ ಆಗಿದೆ. ವಿಡಿಯೋ ಆಧರಿಸಿ ಸಂಚಾರ ಪೊಲೀಸರು ಉದಯಗಿರಿ ನಿವಾಸಿಯಾದ ಅಪ್ರಾಪ್ತನನ್ನು ಬಂಧಿಸಿ, ಆತನ ಬೈಕ್ ವಶಪಡಿಸಿಕೊಂಡಿದ್ದರು.
ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಈತ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೊಲೀಸ್ ಇಲಾಖೆಯಿಂದ ತನ್ನ ತಾಯಿಗೆ ನೀಡಿದ ಸರ್ವಿಸ್ ರಿವಾಲ್ವರ್ ಅನ್ನು ಪ್ರದರ್ಶಿಸುವ ವಿಡಿಯೋವನ್ನು ಸಹ ಅಪ್‌ಲೋಡ್ ಮಾಡಿದ್ದಾನೆ.
ಗುರುಸ್ವಾಮಿ ಅವರ ಪುತ್ರ ಮಹದೇವಸ್ವಾಮಿ ಮಾತನಾಡಿ, ಅಪ್ರಾಪ್ತನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ಅಪಾಯಕಾರಿ ಬೈಕ್ ಸ್ಟಂಟ್‌ಗಳ ವಿಡಿಯೋ ತುಣುಕುಗಳನ್ನು ಉಲ್ಲೇಖಿಸಿ ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ಸಾರ್ವಜನಿಕರು ಹಲವಾರು ಬಾರಿ ದೂರು ನೀಡಿದ್ದಾರೆ. ಆದರೆ, ಆತ ಪೊಲೀಸ್ ಅಧಿಕಾರಿಯ ಮಗನಾಗಿರುವುದರಿಂದ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ನಿರ್ಲಕ್ಷ್ಯ ನನ್ನ ತಂದೆಯ ಸಾವಿಗೆ ಕಾರಣವಾಗಿದೆ. ನಾವು ನ್ಯಾಯ ಮತ್ತು ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.
ಮಾರಂಕಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೂರಾರು ರೈತರು ಘಟನೆಯನ್ನು ಖಂಡಿಸಿ ಕೆ.ಆರ್. ಆಸ್ಪತ್ರೆಯ ಶವಾಗಾರದ ಎದುರು ಪ್ರತಿಭಟನೆ ನಡೆಸಿದರು. ಮಾರಂಕಯ್ಯ ಮಾತನಾಡಿ, 'ಆತನ ವಿರುದ್ಧ ಕಠಿಣ ಕ್ರಮ ಮತ್ತು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ನಾವು ಒತ್ತಾಯಿಸುತ್ತೇವೆ' ಎಂದು ಹೇಳಿದರು.