ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ನೌಕಾಪಡೆಯ ಮಾಜಿ ಅಧಿಕಾರಿ ಸಾವು
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
Published: 18th September 2023 09:26 AM | Last Updated: 18th September 2023 09:26 AM | A+A A-

ಸಂಗ್ರಹ ಚಿತ್ರ
ಮೈಸೂರು: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ
ಬೆಂಗಳೂರು ಸಮೀಪದ ಆನೇಕಲ್‌ನ ಕಿಶೋರ್ ಬಾಬು (45) ಸಾವನ್ನಪ್ಪಿದ ನೌಕಾಪಡೆಯ ಮಾಜಿ ಅಧಿಕಾರಿಯಾಗಿದ್ದಾರೆ. ಗಾಯಾಳುಗಳನ್ನು ಕಿಶೋರ್ ಅವರ ಸಹೋದರ ನವೀನ್ ಬಾಬು, ಸ್ನೇಹಿತರಾದ ಯುವರಾಜ್, ರಮೇಶ್ ಮತ್ತು ಧನಪಾಲ್ ಎಂದು ಗುರ್ತಿಸಲಾಗಿದೆ.
ಕಿಶೋರ್ ಬಾಬು ತಮಿಳುನಾಡು ಮೂಲದವರಾಗಿದ್ದು, ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಆನೇಕಲ್‌ನಿಂದ ಮೈಸೂರು ಮಾರ್ಗವಾಗಿ ಊಟಿಗೆ ತೆರಳುತ್ತಿದ್ದ ವೇಳೆ ನಗುವನಹಳ್ಳಿಯಲ್ಲಿ ಬೆಳಗ್ಗೆ 5.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಸ್ ಯುವಿ ವಾಹನವನ್ನು ಅಜಾಗರೂಕತೆಯಿಂದ ಚಾಲನೆ ಮಾಡಲಾಗಿದ್ದು, ಈ ವೇಳೆ ಮುಂಭಾಗದಲ್ಲಿ ಸಾಗುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಕಾರು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಎಸ್‌ಯುವಿ ಹೊತ್ತಿ ಉರಿದಿದೆ. ಕೂಡಲೇ ಗಾಯಗೊಂಡ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬಳಿಕ ಅವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಮತ್ತು ಶ್ರೀರಂಗಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಕಾರಿನಿಂದ ಹೊರಕ್ಕೆ ರಭಸದಿಂದ ಬಿದ್ದ ಕಿಶೋರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ನಡುವೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.