ಆಜ್ ತಕ್ ಕನ್ಸಲ್ಟಿಂಗ್ ಎಡಿಟರ್ ಸುಧೀರ್ ಚೌಧರಿ ವಿರುದ್ಧ ಅ. 3ರವರೆಗೆ ಬಲವಂತದ ಕ್ರಮ ಬೇಡ: ಕರ್ನಾಟಕ ಹೈಕೋರ್ಟ್

ರಾಜ್ಯ ಸರ್ಕಾರದ ಯೋಜನೆ ಕುರಿತು ತಪ್ಪು ಮಾಹಿತಿ ಹರಡಿದ ಆರೋಪಕ್ಕೆ ಸಂಬಂಧಿಸಿದಂತೆ ಆಜ್ ತಕ್ ಸುದ್ದಿ ವಾಹಿನಿಯ ಕನ್ಸಲ್ಟಿಂಗ್ ಎಡಿಟರ್ ಸುಧೀರ್ ಚೌಧರಿ ವಿರುದ್ಧ ಅಕ್ಟೋಬರ್ 3 ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಬುಧವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ರಾಜ್ಯ ಸರ್ಕಾರದ ಯೋಜನೆ ಕುರಿತು ತಪ್ಪು ಮಾಹಿತಿ ಹರಡಿದ ಆರೋಪಕ್ಕೆ ಸಂಬಂಧಿಸಿದಂತೆ ಆಜ್ ತಕ್ ಸುದ್ದಿ ವಾಹಿನಿಯ ಕನ್ಸಲ್ಟಿಂಗ್ ಎಡಿಟರ್ ಸುಧೀರ್ ಚೌಧರಿ ವಿರುದ್ಧ ಅಕ್ಟೋಬರ್ 3 ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಬುಧವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಅವರನ್ನು ಬಂಧಿಸದಂತೆ ಸೆಪ್ಟೆಂಬರ್ 15 ರಂದು ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಆದರೆ, ಅವರ ವಿರುದ್ಧ ತನಿಖೆಯ ಅಗತ್ಯವಿದೆ ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿತ್ತು.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಸುಧೀರ್‌ ಚೌಧರಿ ಮತ್ತು ಆಜ್‌ತಕ್‌ ಸಂಸ್ಥೆ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಆದರೆ, ದಿನದ ಕಲಾಪದ ಅವಧಿ ಮಗಿದ ಹಿನ್ನೆಲೆಯಲ್ಲಿ ಅಕ್ಟೋಬರ್ 3ರಂದು ಸಂಜೆ 4 ಗಂಟೆಗೆ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ತಿಳಿಸಿತು.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಹಾಯಕ ಆಡಳಿತಾಧಿಕಾರಿ ಶಿವಕುಮಾರ್ ಎಸ್ ಅವರು ದೂರು ದಾಖಲಿಸಿದ್ದು, ಆಜ್ ತಕ್ ವಾಹಿನಿಯ ಸುದ್ದಿ ಕಾರ್ಯಕ್ರಮದ ಮೂಲಕ ಚೌಧರಿ ಅವರು ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ ಎಂದು ಆರೋಪಿಸಿ ತಪ್ಪು ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಲಾಗಿದೆ.

ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ದ್ವೇಷ ಉತ್ತೇಜನ) ಮತ್ತು ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಲ್ಪಸಂಖ್ಯಾತ ಯುವಕರು ವಾಣಿಜ್ಯ ಸಾರಿಗೆ ವಾಹನಗಳನ್ನು ಖರೀದಿಸಲು ಪಡೆಯುವ ಬ್ಯಾಂಕ್ ಸಾಲದ ಮೇಲೆ ಶೇ 50 ರಷ್ಟು ಅಂದರೆ ಮೂರು ಲಕ್ಷ ರೂಪಾಯಿವರೆಗಿನ ಸಬ್ಸಿಡಿ ನೀಡುವ ಕರ್ನಾಟಕ ಸರ್ಕಾರದ ‘ಸ್ವಾವಲಂಬಿ ಸಾರಥಿ ಯೋಜನೆ’ ಕುರಿತು ಚೌಧರಿ ತಮ್ಮ ವಾಹಿನಿಯಲ್ಲಿ ತಪ್ಪು ಮಾಹಿತಿ ಹರಡುವ ಮೂಲಕ ಕೋಮು ಸೌಹಾರ್ದತೆಗೆ ಭಂಗ ತರುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com