ರಾಜ್ಯದ ಪಾಲಿಗೆ 'ಸುಪ್ರೀಂ' ತೀರ್ಪು ಮರಣ ಶಾಸನ: ಮಂಡ್ಯ, ಮೈಸೂರು ಭಾಗದಲ್ಲಿ ಪ್ರತಿಭಟನೆ, ಸಂಸದರ ರಾಜೀನಾಮೆಗೆ ಒತ್ತಾಯ

ಕಾವೇರಿ ಜಲ ವಿವಾದದಲ್ಲಿ ಸುಪ್ರೀಂ ಕೋರ್ಟ್ ನಲ್ಲಿಯಾದರೂ ತಮ್ಮ ಪರ ತೀರ್ಪು ಬರಬಹುದೆಂದು ನಿರೀಕ್ಷಿಸಿದ್ದ ಕರ್ನಾಟಕಕ್ಕೆ ಇಂದು ಗುರುವಾರ ಬಿಗ್ ಶಾಕ್ ಎದುರಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು/ಮಂಡ್ಯ/ಮೈಸೂರು: ಕಾವೇರಿ ಜಲ ವಿವಾದದಲ್ಲಿ ಸುಪ್ರೀಂ ಕೋರ್ಟ್ ನಲ್ಲಿಯಾದರೂ ತಮ್ಮ ಪರ ತೀರ್ಪು ಬರಬಹುದೆಂದು ನಿರೀಕ್ಷಿಸಿದ್ದ ಕರ್ನಾಟಕಕ್ಕೆ ಇಂದು ಗುರುವಾರ ಬಿಗ್ ಶಾಕ್ ಎದುರಾಗಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳು ನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಸಿಡಬ್ಲ್ಯುಎಂಎ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಭಾರೀ ಪ್ರತಿಭಟನೆ, ಪೊಲೀಸರ ಭದ್ರತೆ: ಸುಪ್ರೀಂ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಮೈಸೂರು ಅರಮನೆಯ ಬಳಿಯಿರುವ ಕಾಡಾ ಕಚೇರಿ, ಮಂಡ್ಯದಲ್ಲಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆ ಮುಂದುವರಿಸಿವೆ.

ಸುಪ್ರೀಂ ಕೋರ್ಟ್ ಮುಂದೆ ಕರ್ನಾಟಕ ಸರ್ಕಾರ ತಮಿಳು ನಾಡಿನಂತೆ ಸಮರ್ಥ ವಾದ ಮಂಡಿಸಿಲ್ಲ, ಕಾಂಗ್ರೆಸ್ ಸರ್ಕಾರಕ್ಕೆ ರೈತರ ಹಿತಾಸಕ್ತಿ ಮುಖ್ಯವಾಗಿಲ್ಲ ಎಂದು ಆರೋಪಿಸಿ ತೀವ್ರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. 

ಕಾವೇರಿಗಾಗಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ, ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಅಲ್ಲದೆ, 12 ಗಂಟೆಗೆ ಕರವೇ ನಾರಯಣಗೌಡ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಹೀಗಾಗಿ ಪ್ರತಿಭಟನೆ ರ್ಯಾಲಿ ತಡೆಯಲು ಪೊಲೀಸರು ಸಜ್ಜಾಗಿದ್ದಾರೆ.

ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಹೋರಾಟಗಾರ್ತಿಯರು ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕ ಪಾಲಿಗೆ ಮರಣ ಶಾಸನ ಎಂದು ಕಣ್ಣೀರಿಡುತ್ತಿದ್ದಾರೆ. ಕರ್ನಾಟಕದ ಮಂಡ್ಯ, ಮೈಸೂರು ಭಾಗದ ಜನರಿಗೆ ಕುಡಿಯಲು ನೀರಿಲ್ಲದಿರುವಾಗ ತಮಿಳು ನಾಡು ರೈತರ ಬೆಳೆಗಳಿಗೆ ನೀರು ಕೇಳುತ್ತಿರುವುದು ಎಷ್ಟು ಸರಿ, ರಾಜ್ಯದ ನಾಯಕರು ಕೇಂದ್ರದಲ್ಲಿ ಕುಳಿತು ಏನು ಮಾಡುತ್ತಿದ್ದಾರೆ, ರಾಜ್ಯದ ಸಂಸದರೆಲ್ಲರೂ ತೀರ್ಪು ಖಂಡಿಸಿ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಮೈಸೂರಿನ ಬಸವೇಶ್ವರ ವೃತ್ತದಿಂದ ಕಾಡಾ ಕಚೇರಿಯವರೆಗೂ ರೈತ ಮಹಿಳೆಯರು, ಕನ್ನಡಪರ ಸಂಘಟನೆಗಳು ಮೆರವಣಿಗೆ ಸಾಗಿ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. 

ಕರ್ನಾಟಕ ಮತ್ತು ಕಾವೇರಿ ಕಣಿವೆ ಪ್ರದೇಶದಲ್ಲಿ ತೀವ್ರತರವಾದ ಬರಗಾಲವಿದೆ. ತಮಿಳುನಾಡಿಗೆ ಮತ್ತೆ ಹದಿನೈದು ದಿನಗಳ ಕಾಲ 5,000 ಕ್ಯೂಸೆಕ್ ನೀರು ಹರಿಸಲು ಆದೇಶ ಮಾಡಿರೋದು ಅನ್ಯಾಯ. ಹಳೇ ಮೈಸೂರಿನ ಭಾಗದ ಜನರಿಗೆ ವಿಷ ಉಣಿಸುವ ಆದೇಶವಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದನ್ನು ಪಾಲಿಸಬಾರದು. ಕರ್ನಾಟಕದ ರೈತರಿಗೆ ಮರಣ ಶಾಸನವಾಗಿರುವ ಈ ಆದೇಶ ವಾಪಾಸ್ ಪಡೆಯಬೇಕು. ಜನರಿಗೆ ಕುಡಿಯುವ ನೀರಿಗೆ ಆಸರೆಯಾಗಿರುವ ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಒತ್ತಾಯಿಸಿದ್ದಾರೆ.

ಬೀದಿಗಿಳಿದ ಕನ್ನಡ ಪರ ಸಂಘಟನೆಗಳು: ಚಾಮರಾಜನಗರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಕನ್ನಡ ಪರ ಸಂಘಟನೆಗಳು ಬೀದಿಗಿಳಿದಿವೆ. ಕೈಯಲ್ಲಿ ಖಾಲಿ ಮಡಕೆ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸುತ್ತಿವೆ.

ಕನ್ನಡ ಪರ ಹೋರಾಟಗಾರರು ಸುಪ್ರೀಂ ಆದೇಶದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಯಲ್ಲಿ ಮಡಿಕೆ ಹಿಡಿದು ಭುವನೇಶ್ವರಿ ವೃತ್ತದ ವರೆಗೆ ಕಾಲ್ನಡಿಗೆ ಹೊರಟಿದ್ದಾರೆ. ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಪ್ರತಿ ಬಾರಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com