ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಎಸ್‌ಸಿ/ಎಸ್‌ಟಿ ಮಹಿಳೆಯರಿಗೆ ಒಳಮೀಸಲಾತಿ ಆಗತ್ಯ- ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಸ್ವಾಗತಾರ್ಹ ನಿರ್ಧಾರವಾಗಿದ್ದರೂ ಹಿಂದುಳಿದ ಜಾತಿಯ ಮಹಿಳೆಯರಿಗೆ ಒಳಮೀಸಲಾತಿ ನೀಡದೆ ಇದ್ದರೆ ಈ ಸಮುದಾಯದ ಮಹಿಳೆಯರಿಗೆ ಅನ್ಯಾಯ ಮಾಡಿದಂತಾಗುವುದು ಮಾತ್ರವಲ್ಲ ಮೀಸಲಾತಿಯ ಉದ್ದೇಶವೇ ವಿಫಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಸ್ವಾಗತಾರ್ಹ ನಿರ್ಧಾರವಾಗಿದ್ದರೂ ಹಿಂದುಳಿದ ಜಾತಿಯ ಮಹಿಳೆಯರಿಗೆ ಒಳಮೀಸಲಾತಿ ನೀಡದೆ ಇದ್ದರೆ ಈ ಸಮುದಾಯದ ಮಹಿಳೆಯರಿಗೆ ಅನ್ಯಾಯ ಮಾಡಿದಂತಾಗುವುದು ಮಾತ್ರವಲ್ಲ ಮೀಸಲಾತಿಯ ಉದ್ದೇಶವೇ ವಿಫಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಲಿಂಗ ಅಸಮಾನತೆಯ ಜೊತೆಯಲ್ಲಿ ಜಾತಿ ಅಸಮಾನತೆಯನ್ನೂ ಒಳಗೊಂಡಿರುವ ಭಾರತೀಯ ಸಮಾಜದಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿದ ಮಹಿಳೆಯರು ರಾಜಕೀಯವಾಗಿ ಉಳಿದವರ ಜೊತೆ ಪೈಪೋಟಿ ನಡೆಸಿ ಪ್ರಾತಿನಿಧ್ಯ ಪಡೆಯುವಂತಹ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಾಮರ್ಥ್ಯ ಇಲ್ಲದಿರುವುದನ್ನು ನಾವು ಗಮನಿಸಬೇಕಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಾಗಲೇ ರಾಜಕೀಯ ಮೀಸಲಾತಿ ಇರುವುದರಿಂದ ಆ ಸಮುದಾಯಗಳ ಮಹಿಳೆಯರಿಗೆ ಮೀಸಲಾತಿ ನೀಡುವುದು ಸಮಸ್ಯೆಯಾಗಲಾರದು.

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿಯ ಮಸೂದೆಯನ್ನು ವಿವರವಾಗಿ ಪರಿಶೀಲಿಸಿದರೆ ಮಹಿಳೆಯರಿಗೆ ರಾಜಕೀಯ ನ್ಯಾಯಕೊಡಿಸುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಲಾಭ ಪಡೆಯುವ ಸ್ವಾರ್ಥವೇ ಕಾಣುತ್ತಿದೆ. ಈಗಿನ ಮಸೂದೆಯನ್ನು ಇದೇ ರೂಪದಲ್ಲಿ ಜಾರಿಗೆ ತರಲು ಹೊರಟರೆ ಮಹಿಳೆಯರು ರಾಜಕೀಯ ಮೀಸಲಾತಿ ಪಡೆಯಲು ಇನ್ನೆರಡು ದಶಕಗಳ ಕಾಲ ಕಾಯಬೇಕಾಗಬಹುದು ಎಂದು ಹೇಳಿದ್ದಾರೆ.

ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಬೇಕೆಂಬ ಪ್ರಾಮಾಣಿಕ ಉದ್ದೇಶವನ್ನು ಪ್ರಧಾನಿ ಮೋದಿಯವರು ಹೊಂದಿದ್ದರೆ 2010ರಲ್ಲಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ರಾಜ್ಯ ಸಭೆಯಲ್ಲಿ  ಅಂಗೀಕಾರ ಪಡೆದಿರುವ ಮಸೂದೆಯನ್ನೇ ಲೋಕಸಭೆಯಲ್ಲಿ ಮಂಡಿಸಬೇಕಾಗಿತ್ತು. 2010ರಲ್ಲಿ ಮಸೂದೆಗೆ ರಾಜ್ಯಸಭೆ ನೀಡಿರುವ ಅಂಗೀಕಾರ ಇನ್ನೂ ಚಾಲ್ತಿಯಲ್ಲಿರುವ ಕಾರಣ ಲೋಕಸಭೆಯಲ್ಲಿ ಅಂಗೀಕಾರ ಪಡೆದ ಕೂಡಲೇ ಮಸೂದೆ ಕಾಯ್ದೆಯಾಗಿ ರೂಪುಗೊಳ್ಳುವ ಪ್ರಕ್ರಿಯೆ ಪ್ರಾರಂಭವಾಗುತ್ತಿತ್ತು. ಆದರೆ, ಮೋದಿ ಸರ್ಕಾರ ಉದ್ದೇಶಪೂರ್ವಕವಾಗಿ ಮಸೂದೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿರುವುದರಿಂದ ಅದನ್ನು ಮತ್ತೆ ರಾಜ್ಯಸಭೆಯಲ್ಲಿ ಮಂಡಿಸಬೇಕಾಗಿದೆ.

ಮುಂದಿನ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಡೆದ ನಂತರವಷ್ಟೇ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಮಸೂದೆಯಲ್ಲಿಯೇ ಹೇಳಿರುವುದರಿಂದ ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕನಿಷ್ಠ 20 ವರ್ಷ ಬೇಕಾಗಬಹುದು. ಮುಂದಿನ ಜನಗಣತಿ 2026ರಲ್ಲಿ ಮತ್ತು ಕ್ಷೇತ್ರಮರುವಿಂಗಡಣೆ 2031ರಲ್ಲಿ ನಡೆಯುವ ಸಾಧ್ಯತೆ ಇದೆ.

ಮಹಿಳೆಯರಿಗೆ ಶೇಕಡಾ 33ರಷ್ಟು ರಾಜಕೀಯ ಮೀಸಲಾತಿ ನೀಡುವ ಮಸೂದೆ ಮೂಲತ: ಕಾಂಗ್ರೆಸ್ ಪಕ್ಷದ ಕನಸಿನ ಕೂಸು. ಈ ಕನಸನ್ನು ನನಸು ಮಾಡಲು ಪ್ರಾಮಾಣಿಕವಾದ ಪ್ರಯತ್ನ ಮಾಡಿದವರು ನಮ್ಮ ಹೆಮ್ಮೆಯ ನಾಯಕರಾದ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಎನ್ನುವುದನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳಬೇಕಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ರಾಜಕೀಯ ಮೀಸಲಾತಿ ನೀಡುವ ಮಸೂದೆಯನ್ನು ಮೊದಲ ಬಾರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು 1989ರಲ್ಲಿಯೇ ಲೋಕಸಭೆಯಲ್ಲಿ ಮಂಡಿಸಿದ್ದರು. ಆದರೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಲು ಸಾಧ್ಯವಾಗಿರಲಿಲ್ಲ.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಸ್ಥಾನಗಳಲ್ಲಿ ಶೇಕಡಾ 33ರಷ್ಟನ್ನು ಮಹಿಳೆಯರಿಗೆ ಮೀಸಲಾತಿ ನೀಡುವ ಐತಿಹಾಸಿಕ ಮಸೂದೆ 1993ರಲ್ಲಿ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಕಾಲದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅನುಮೋದನೆಗೊಂಡು ಅನುಷ್ಠಾನಗೊಂಡಿದೆ. ಈ ಕ್ರಾಂತಿಕಾರಿ ಬದಲಾವಣೆಗೆ ಕಾಂಗ್ರೆಸ್ ಪಕ್ಷ ಕಾರಣ ಎನ್ನುವುದು ಕೂಡಾ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿ ಮಹಿಳಾ ಮೀಸಲಾತಿಯನ್ನೂ ಸೇರಿಸಿಕೊಂಡಿತ್ತು. 2010ರಲ್ಲಿ  ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದ ಕಾಂಗ್ರೆಸ್ ಸರ್ಕಾರ ಅದಕ್ಕೆ ಅಂಗೀಕಾರ ಪಡೆಯಲು ಯಶಸ್ವಿಯಾಗಿತ್ತು.

ಸಂಸತ್ ಮತ್ತು ವಿಧಾನಮಂಡಲಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕಾಯ್ದೆಯನ್ನು ಜಾರಿಗೆ ತರುವಂತೆ ಕಾಂಗ್ರೆಸ್ ಪಕ್ಷ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಬಂದಿದೆ. ರಾಜಕೀಯ ಭಿನ್ನಮತಗಳನ್ನು ಮೀರಿ ಮಹಿಳಾ ಮೀಸಲಾತಿ ಮಸೂದೆ ಸಂಸತ್ ನಲ್ಲಿ ಅಂಗೀಕಾರವಾಗುವಂತೆ ಪ್ರಯತ್ನ ಮಾಡಿ ಎಂದು 2018ರಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಲೋಕಸಭೆಯಲ್ಲಿಯೇ ಮನವಿ ಮಾಡಿದ್ದರು.

2019ರ ಲೋಕಸಭಾ ಚುನಾವಣೆಯ ಕಾಲದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಮಹಿಳೆಯರ ರಾಜಕೀಯ ಮೀಸಲಾತಿಯನ್ನು ಸೇರಿಸಲಾಗಿದ್ದು ಅದಕ್ಕೆ ನಾವು ಸದಾ ಬದ್ದರಾಗಿದ್ದೇವೆ. ಮಹಿಳಾ ಮೀಸಲಾತಿ ವಿಧೇಯಕದ ವಿಚಾರದಲ್ಲಿ ಬಿಜೆಪಿ ಆಡಳಿತವಿರುವ, ದೇಶದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಯೋಗಿ ಆದಿತ್ಯನಾಥ್‌ ಅವರ ಅಭಿಪ್ರಾಯವೇನಿತ್ತು ಎನ್ನುವುದು ಇಡೀ ದೇಶಕ್ಕೇ ಗೊತ್ತಿರುವ ವಿಚಾರವಾಗಿದೆ. ಸಂಸದರಾಗಿದ್ದ ವೇಳೆ ಆದಿತ್ಯನಾತ್‌ ಅವರು ಈ ವಿಚಾರವಾಗಿ ಅಭಿಪ್ರಾಯಭೇದ ವ್ಯಕ್ತಪಡಿಸಿದ್ದರು. ಮೊದಲು ಈ ವಿಷಯದಲ್ಲಿ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆಯಾಗಿ ಸಹಮತ ಮೂಡಬೇಕು ಎಂದಿದ್ದರು. “ಕಾಂಗ್ರೆಸ್‌ ನ ಪಾಪವನ್ನು ನಾವೇಕೆ ತಲೆಯ ಮೇಲೆ ಹೊರಬೇಕು” ಎಂದು ಹೀಗಳೆದಿದ್ದರು. ಈಗಲೂ ಅವರ ಅಭಿಪ್ರಾಯ ಇದೇ ಇದೆಯೋ ಅಥವಾ ಬದಲಾಗಿದೆಯೋ ಎಂದು ಈ ವೇಳೆ ಕೇಳಬಯಸುತ್ತೇನೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com