ಕಾವೇರಿ, ಮಹಾದಾಯಿ ಪ್ರಕರಣ: ಇದುವರೆಗೆ ವಾದ ಮಂಡನೆಗಾಗಿ ರಾಜ್ಯದಿಂದ 122 ಕೋಟಿ ರೂ. ಹಣ ವ್ಯಯ!
ಕಾವೇರಿ, ಕೃಷ್ಣಾ ಹಾಗೂ ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ನ್ಯಾಯ ಮಂಡಳಿಗಳ ಮುಂದೆ ವಾದ ಮಂಡನೆಗಾಗಿ ರಾಜ್ಯ ಸರ್ಕಾರವು ರೂ.122 ಕೋಟಿಗೂ ಅಧಿಕ ಮೊತ್ತವನ್ನು ಶುಲ್ಕದ ರೂಪದಲ್ಲಿ ಪಾವತಿಸಿದೆ ಎಂಬ ಅಂಶ ತಿಳಿದು ಬಂದಿದೆ.
Published: 28th September 2023 08:11 AM | Last Updated: 28th September 2023 03:44 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕಾವೇರಿ, ಕೃಷ್ಣಾ ಹಾಗೂ ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ನ್ಯಾಯ ಮಂಡಳಿಗಳ ಮುಂದೆ ವಾದ ಮಂಡನೆಗಾಗಿ ರಾಜ್ಯ ಸರ್ಕಾರವು ರೂ.122 ಕೋಟಿಗೂ ಅಧಿಕ ಮೊತ್ತವನ್ನು ಹಿರಿಯ, ಕಿರಿಯ ವಕೀಲರು ಹಾಗೂ ಅಡ್ವೊಕೇಟ್ ಜನರಲ್‌ಗಳಿಗೆ ಶುಲ್ಕದ ರೂಪದಲ್ಲಿ ಪಾವತಿಸಿದೆ ಎಂಬ ಅಂಶ ಮಾಹಿತಿ ಹಕ್ಕು ದಾಖಲೆಗಳಿಂದ ತಿಳಿದು ಬಂದಿದೆ. ಈ ಪೈಕಿ ಐವರು ಹಿರಿಯ ವಕೀಲರಿಗೆ ರೂ.87 ಕೋಟಿಗೂ ಅಧಿಕ ಹಣವನ್ನು ಶುಲ್ಕವನ್ನಾಗಿ ಪಾವತಿಸಿರುವುದಾಗಿ ತಿಳಿದುಬಂದಿದೆ.
ಕಾವೇರಿ, ಕೃಷ್ಣಾ ಮತ್ತು ಮಹದಾಯಿ ಜಲ ವಿವಾದ ನ್ಯಾಯ ಮಂಡಳಿಯಲ್ಲಿನ ವಾದ ಮಂಡನೆಗಾಗಿ ರೂ.122,75,95,882 ರೂಪಾಯಿಗಳನ್ನು 41 ವಕೀಲರಿಗೆ ಶುಲ್ಕದ ರೂಪದಲ್ಲಿ ಪಾವತಿಸಲಾಗಿದೆ ಎಂದು ರಾಜ್ಯದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮಾಹಿತಿ ಹಕ್ಕು ಕಾರ್ಯಕರ್ತ ಬೆಳಗಾವಿಯ ಭೀಮಪ್ಪ ಗಡಾದ ಅವರಿಗೆ ದಾಖಲೆ ಸಮೇತ ವಿವರ ಒದಗಿಸಿದ್ದಾರೆ.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿ ನಡುವಿನ ಕಾವೇರಿ ನೀರು ಹಂಚಿಕೆ ವಿವಾದವು 1990ರ ಜೂನ್ 2ರಿಂದ ನ್ಯಾಯ ಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. 1990ರ ಜೂನ್ 2ರಿಂದ 2017ರ ಜುಲೈ 10ರವರೆಗಿನ ಲಭ್ಯ ಮಾಹಿತಿಯ ಪ್ರಕಾರ ವಕೀಲರಿಗೆ ರೂ.54,13,21,282 ರೂಪಾಯಿಗಳನ್ನು ಶುಲ್ಕದ ರೂಪದಲ್ಲಿ ಪಾವತಿಸಲಾಗಿದೆ. ಒಟ್ಟು 580 ಬಾರಿ ವಿಚಾರಣೆಗಳು (ಸಿಟಿಂಗ್) ನಡೆದಿವೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ನಡುವೆ ನಡೆಯುತ್ತಿರುವ ಕೃಷ್ಣಾ ಜಲ ವಿವಾದ ಪರಿಹಾರಕ್ಕಾಗಿ 2004ರ ಏಪ್ರಿಲ್ 2ರಂದು ಕೃಷ್ಣಾ ಜಲವಿವಾದ ನ್ಯಾಯ ಮಂಡಳಿ ರಚನೆಯಾಗಿದೆ. ಅಂದಿನಿಂದ 2013ರ ನವೆಂಬರ್ 29ರವರೆಗೆ 295 ವಿಚಾರಣೆ ನಡೆದಿದ್ದು, ರೂ.43,24,39,000 ರೂಪಾಯಿಗಳನ್ನು ರಾಜ್ಯದ ಪರವಾಗಿ ವಾದಿಸಿದ ವಕೀಲರಿಗೆ ಪಾವತಿಸಲಾಗಿದೆ.
ಇದನ್ನೂ ಓದಿ: 6 ತಿಂಗಳಲ್ಲಿ ಎಲ್ಲಾ ಇಲಾಖೆಗಳ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಪೂರ್ಣಗೊಳಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ಮಹದಾಯಿ ನದಿ ನೀರು ವಿವಾದ ಪರಿಹಾರಕ್ಕಾಗಿ 2010ರ ನವೆಂಬರ್ 16ರಂದು ಮಹದಾಯಿ ಜಲ ವಿವಾದ ನ್ಯಾಯ ಮಂಡಳಿ ರಚಿಸಲಾಗಿದೆ. ಅಂದಿನಿಂದ 2017ರ ಡಿಸೆಂಬರ್ 1ರವರೆಗೆ 97 ವಿಚಾರಣೆಗಳು ನಡೆದಿದ್ದು, ರೂ.25,38,35,600 ರೂಪಾಯಿಯನ್ನು ವಕೀಲರಿಗೆ ಪಾವತಿಸಲಾಗಿದೆ.
ಹಿರಿಯ ವಕೀಲರಾದ ಅನಿಲ್ ದಿವಾನ್ (ರೂ.29,78,12,030), ಫಾಲಿ ನಾರಿಮನ್ (ರೂ.27,45,22,050), ಎಸ್ ಎಸ್ ಜವಳಿ (ರೂ.12,61,67,153), ಶ್ಯಾಮ್ ದಿವಾನ್ (ರೂ.4,63,50,000), ಮೋಹನ್ ಕಾತರಕಿ ಅವರಿಗೆ ಒಟ್ಟಾರೆ ಸುಮಾರು ರೂ.87 ಕೋಟಿ ರೂಪಾಯಿಗೂ ಅಧಿಕ ಮೊತ್ತ ಪಾವತಿಯಾಗಿದೆ.
ಕರ್ನಾಟಕದ ಅಡ್ವೊಕೇಟ್ ಜನರಲ್‌ಗಳಾಗಿದ್ದ ರವಿವರ್ಮ ಕುಮಾರ್ (ರೂ.64,70,000), ಎಸ್ ವಿಜಯಶಂಕರ (ರೂ.13,00,000), ಅಶೋಕ್ ಹಾರನಹಳ್ಳಿ (ರೂ.2,10,000), ಪಾರ್ಥಸಾರಥಿ (ರೂ.1,50,000), ಮಧುಸೂಧನ್ ಆರ್. ನಾಯಕ್ (ರೂ.15,75,800) ಮತ್ತು ಪ್ರಭುಲಿಂಗ ನಾವದಗಿ (ರೂ.23,54,215) ಅವರಿಗೆ ಒಟ್ಟು ರೂ.2,62,42,215 ರೂಪಾಯಿ ಪಾವತಿಯಾಗಿದೆ.
ಕರ್ನಾಟಕದವರಾದ ಸುಪ್ರೀಂ ಕೋರ್ಟ್ ವಕೀಳ ಬ್ರಿಜೇಶ್ ಕಾಳಪ್ಪಗೆ ರೂ.6,51,35,544 ಮತ್ತು ಕರ್ನಾಟಕದ ಹಿರಿಯ ವಕೀಲ ಉದಯ್ ಹೊಳ್ಳ ಅವರಿಗೆ ರೂ.1,56,60,000 ರೂಪಾಯಿ ಪಾವತಿಯಾಗಿದೆ.