ಹುಬ್ಬಳ್ಳಿ: ಒಂದೇ ಬೈಕಿನಲ್ಲಿ 5 ಮಂದಿ ಬಾಲಕರ ಪಯಣ, ಪ್ರಕರಣ ದಾಖಲು, ಬೈಕ್ ಸೀಜ್!
ಹುಬ್ಬಳ್ಳಿ: ಒಂದೇ ಬೈಕಿನಲ್ಲಿ 5 ಮಂದಿ ಬಾಲಕರು ಪ್ರಯಾಣ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕುರಿತು ಕ್ರಮ ಕೈಗೊಂಡಿರುವ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರು ಬೈಕ್ ಸೀಜ್ ಮಾಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಸಿಲ್ವರ್ ಟೌನ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಶಾಲಾ ಬಾಲಕನೋರ್ವ ಬೈಕ್ ಮೇಲೆ ಇತರೆ 4 ಮಂದಿ ಸ್ನೇಹಿತರನ್ನು ಕೂರಿಸಿಕೊಂಡು ಅಪಾಯಕಾರಿಯಾಗಿ ಬೈಕ್ ಚಲಾಯಿಸಿದ್ದಾನೆ.
ಕೆ.ಎ. 25 – ವೈ 5077 ನೋಂದಣಿ ಹೊಂದಿರುವ ಈ ಬೈಕ್ ನಲ್ಲಿ ಬಾಲಕ ಪ್ರಯಾಣ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರು ಬೈಕ್ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಬೈಕ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು, ಅದರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತರ ಕೈಯಲ್ಲಿ ವಾಹನಗಳನ್ನ ಕೊಡಬಾರದು ಎಂದು ಅದೆಷ್ಟೇ ಜಾಗೃತಿ ಮೂಡಿಸಿದರು ಕೂಡ, ಕೆಲ ಪೊಷಕರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮಕ್ಕಳ ಕೈಗೆ ಬೈಕ್, ಸ್ಕೂಟರ್ ಕೊಟ್ಟು ಕಳಿಸಿದ್ದು, ಇದೀಗ ಪೊಲೀಸರ ಕೈಗೆ ಸಿಕ್ಕು ಪ್ರಕರಣ ಎದುರಿಸುವಂತಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ