ಆರ್​.ಆರ್​. ನಗರದಲ್ಲಿ ರಸ್ತೆ ಅಗಲೀಕರಣದ ಬದಲು ಸುರಂಗ ರಸ್ತೆ ನಿರ್ಮಿಸುವ ಕುರಿತು ಚಿಂತನೆ: ಡಿಕೆ ಶಿವಕುಮಾರ್

ರಾಜರಾಜೇಶ್ವರಿನಗರದಲ್ಲಿ ರಸ್ತೆ ಅಗಲೀಕರಣದ ಬದಲು ಸುರಂಗ ರಸ್ತೆ ನಿರ್ಮಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಭಾನುವಾರ ಹೇಳಿದರು.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿ ರಸ್ತೆ ಅಗಲೀಕರಣದ ಬದಲು ಸುರಂಗ ರಸ್ತೆ ನಿರ್ಮಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಭಾನುವಾರ ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ಪರ ಪ್ರಚಾರದಲ್ಲಿ ಪಾಲ್ಗೊಂಡ ವೇಳೆ ಡಿಕೆ ಶಿವಕುಮಾರ್ ಅವರು ಮಾತನಾಡಿದರು.

ಸಹೋದರ ಡಿ.ಕೆ.ಸುರೇಶ್ ಪರ ಮತ ಯಾಚಿಸುತ್ತಿದ್ದ ಸಂದರ್ಭದಲ್ಲಿ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು. ಆರ್ ಆರ್ ನಗರದಲ್ಲಿ ಸುರಂಗ ರಸ್ತೆ ನಿರ್ಮಿಸುವ ಕುರಿತು ಪ್ರಸ್ತಾವನೆ ಬಂದಿದೆ. ಇದು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.

ಇದು ತುಂಬಾ ಜನನಿಬಿಡ ಜಂಕ್ಷನ್ ಮತ್ತು ರಿಂಗ್ ರೋಡ್ ಅನ್ನು ಸಂಪರ್ಕಿಸುತ್ತದೆ ಎಂಬುದು ನನಗೆ ತಿಳಿದಿದೆ. ನಾನು ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಆರ್‌ಆರ್‌ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮಾತನಾಡಿ, ‘ನಮ್ಮ ನೀರು ನಮ್ಮ ಹಕ್ಕು’ ಅಭಿಯಾನದ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಹಕ್ಕಿಗಾಗಿ ಹೋರಾಟ ನಡೆಸಿದ್ದೇವೆ. ಮೇ ಅಂತ್ಯದೊಳಗೆ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಳ್ಳಲಿದ್ದು, ಇದರಿಂದ 110 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದರು.

ಡಿಕೆ ಶಿವಕುಮಾರ್
ಬಿಬಿಎಂಪಿ ಬಜೆಟ್: ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸುರಂಗ ರಸ್ತೆ ಯೋಜನೆ

ಮೋದಿ ಅಲೆ ಇದ್ದಾಗ ನನ್ನ ಸಹೋದರ ಸುರೇಶ್ 2.3 ಲಕ್ಷ ಮತಗಳ ಮುನ್ನಡೆಯೊಂದಿಗೆ ಗೆದ್ದಿದ್ದರು. ಈಗ ಮೋದಿ ಅಲೆ ಅಥವಾ ಬಿಜೆಪಿ ಅಲೆ ಇಲ್ಲ. ನೀವೆಲ್ಲರೂ ಶ್ರದ್ಧೆಯಿಂದ ನಮಗೆ ಮತ ನೀಡಬೇಕು. ನೀವು ನಮಗೆ ಮತ ಹಾಕಿದರೆ ಮಾತ್ರ ನಿಮ್ಮ ಸೇವೆ ಮಾಡಲು ಸಾಧ್ಯ. ನಮ್ಮ ಮೇಲೆ ವಿಶ್ವಾಸ ಇಟ್ಟು ನೀವು ನಮ್ಮ ಪರ ನಿಂತರೆ, ನಾವು ಮುಂದೆ ನಿಂತು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ಬಿಜೆಪಿಯವರನ್ನು ನಂಬಿಕೊಂಡರೆ ಏನೂ ಆಗುವುದಿಲ್ಲ, ನಿಮಗೆ ನೀರು ಕೊಟ್ಟು, ರಸ್ತೆ ಹಾಗೂ ಇತರೆ ಸಮಸ್ಯೆಯನ್ನು ನಾವು ಬಗೆಹರಿಸುತ್ತೆವೆಯೇ ಹೊರತು, ದೆಹಲಿಯಿಂದ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಕಾವೇರಿ ಜಲಾನಯನ ಪ್ರದೇಶದ ಜನರಿಗೆ, ಬೆಂಗಳೂರು ಜನರಿಗೆ ಕುಡಿಯುವ ನೀರು ಪೂರೈಸಲು ನಾನು ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ನೀರಿನ ಸಮಸ್ಯೆ ಬಗೆಹರಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com