ಈಗಲಾದರೂ ಎಚ್ಚೆತ್ತುಕೊಂಡು ಹಣ ಬಿಡುಗಡೆ ಮಾಡಿ: ಕೇಂದ್ರ ಸರ್ಕಾರಕ್ಕೆ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಕರ್ನಾಟಕ ರಾಜ್ಯದಿಂದ ಬರ ಪರಿಹಾರಕ್ಕೆ ಕೇಂದ್ರಕ್ಕೆ ಸಲ್ಲಿಕೆ ಮಾಡಲಾದ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌ನ ಪೀಠವು ಕೇಂದ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ. 2 ವಾರದೊಳಗೆ ಬರಿಹಾರಕ್ಕಾಗಿ ಸಲ್ಲಿಕೆ ಮಾಡಲಾದ ಅರ್ಜಿಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಗಡುವು ನೀಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕರ್ನಾಟಕದ ಬರ ಪರಿಹಾರ ಅರ್ಜಿ ವಿಚಾರಣೆಯನ್ನು ನೇರವಾಗಿ ವೀಕ್ಷಿಸಲು ತೆರಳಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಕಲಾಪ ಮುಗಿದ ನಂತರ ಹೊರಗೆ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದರು.
ಕರ್ನಾಟಕದಲ್ಲಿ ಬರಗಾಲ ಆವರಿಸಿದ್ದು, ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ 7 ತಿಂಗಳು ಕಳೆದರೂ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ಇಂದು ಅದರ ಬಗ್ಗೆ ವಿಚಾರಣೆ ನಡೆಸಿದಾಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೇಂದ್ರ ಸರ್ಕಾರವು 2 ವಾರದೊಳಗೆ ಕರ್ನಾಟಕದ ಅರ್ಜಿಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ತಿಳಿಸಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ವಿಳಂಬ ಸರಿಯಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಎರಡು ವಾರದ ಒಳಗಡೆ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಬೇಕು, ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು. ರಾಜ್ಯ ಸರ್ಕಾರಗಳು ಕೇಂದ್ರದಿಂದ ರೊಟೀನ್ ಆಗಿ ಆಗುವ ಕೆಲಸದ ಬಗ್ಗೆ ತಕರಾರು ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಸೂಕ್ತ ಅವಧಿಯಲ್ಲಿಯೇ ಸೂಕ್ತ ತೀರ್ಮಾನ ತೆಗೆದುಕೊಂಡಿದ್ದರೆ, ಸುಪ್ರೀಂ ಕೋರ್ಟ್‌ವರೆಗೆ ಈ ಅರ್ಜಿ ಸಲ್ಲಿಕೆಯೇ ಆಗುತ್ತಿರಲಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಜೊತೆಗೆ, ಬರ ಪರಿಹಾರ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಬೇಕೆಂದಿದ್ದೇವೆ ಎಂದಾಗ ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಅವರು ನೋಟೀಸ್ ಜಾರಿ ಮಾಡುವುದು ಬೇಡ. ಎರಡು ವಾರಗಳಲ್ಲಿ ಸರ್ಕಾರದ ತೀರ್ಮಾನವನ್ನು ನ್ಯಾಯಾಲಯದ ಮುಂದಿಡುತ್ತೇವೆ ಎಂದು ಹೇಳಿದರು. ಇದರಿಂದ ನೋಟೀಸ್ ಜಾರಿ ಮಾಡಬೇ 2 ವಾರಗಳ ಗಡುವು ನೀಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕದ ವಾದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ಗೆಲವು ಸಿಕ್ಕಿದೆ. ಮಾನ್ಯ ನ್ಯಾಯ ಮೂರ್ತಿಗಳೇ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಇಷ್ಟರೊಳಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿತ್ತು ಎಂದು ಸೂಚಿಸಿದ್ದಾರೆ. ಒಟ್ಟಾರೆ, ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ನಮ್ಮ ರಾಜ್ಯದ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಈಗಲಾದರೂ ಕೇಂದ್ರ ಸರ್ಕಾರ ಒಂದು ಸೂಕ್ತ ತೀರ್ಮಾನ ತೆಗೆದುಕೊಂಡು ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ಭರವಸೆ ಇಟ್ಟುಕೊಂಡಿದ್ದೇವೆ. ಈ ನಂತರ ಕೂಡಲೇ ನಾವು ರಾಜ್ಯದ ರೈತರಿಗೆ ಬರ ಪರಿಹಾರವನ್ನು ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಬರ ಪರಿಹಾರವಾಗಿ 4,663 ಕೋಟಿ ರೂ. ನೀಡಿದರೆ ಒಬ್ಬ ರೈತರಿಗೆ ತಲಾ 13 ರಿಂದ 14 ಸಾವಿರ ರೂ. ಬರ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಈ ಬರಗಾಲದ ಸಂದರ್ಭದಲ್ಲಿ ನಾವು ಕೊಡುವ ಪರಿಹಾರದಿಂದ ಕೃಷಿ ಜಮೀನಿನಿಂದ ಉಂಟಾದ ನಷ್ಟವನ್ನು ಭರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆಲ್ಲ ನ್ಯಾಯ ಒದಗಿಸಿಕೊಡುತ್ತಿರುವ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಅರ್ಪಿಸುತ್ತೇನೆ.
ಈಗಲಾದರೂ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಬೇಕು. ಬರ ಪರಿಹಾರಕ್ಕಾಗಿ ರಾಜ್ಯವು 18,172 ರೂ.ಗಳನ್ನು ಕೇಳಿದೆ, ಅದರಲ್ಲಿ 4,663 ಕೋಟಿ ರೂ ಬಿಡುಗಡೆ ಮಾಡಿದರೆ ಪ್ರತಿ ರೈತನಿಗೆ ಸುಮಾರು 13 ಸಾವಿರ ರೂ. ಸಿಗಲಿದೆ. ಬರಗಾಲದಲ್ಲಿ ರೈತರಿಗೆ ಹಣ ಕೊಟ್ಟರೆ ಸ್ವಲ್ಪವಾದರೂ ಪರಿಹಾರ ಸಿಗುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ