ಕರಾವಳಿ ಭಾಗ ಸೇರಿದಂತೆ ಕೇರಳ, ತಮಿಳು ನಾಡಿನಲ್ಲಿ ಮುಸಲ್ಮಾನರ ಪವಿತ್ರ ಹಬ್ಬ ಈದುಲ್ ಫಿತರ್ ಇಂದು ಆಚರಣೆ

ಮುಸಲ್ಮಾನರ ಪವಿತ್ರ ಹಬ್ಬವಾದ ಈದುಲ್ ಫಿತರ್ ನ್ನು ಇಂದು ಬುಧವಾರ ನಾಡಿನಾದ್ಯಂತ ಆಚರಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಸಲ್ಮಾನರ ಪವಿತ್ರ ಹಬ್ಬವಾದ ಈದುಲ್ ಫಿತರ್ ನ್ನು ಇಂದು ಬುಧವಾರ ನಾಡಿನಾದ್ಯಂತ ಆಚರಿಸಲಾಗುತ್ತಿದೆ.

ನಿನ್ನೆ ಕೇರಳದ ಪೂನ್ನಾಣಿಯಲ್ಲಿ ಚಂದ್ರನ ದರ್ಶನವಾದರಿಂದ ಇಂದು ಕೇರಳ ರಾಜ್ಯ ಸೇರಿ ಕರಾವಳಿ ಭಾಗ ಮಂಗಳೂರು, ಕೊಡಗಿನಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಮುಸಲ್ಮಾನರು 29 ದಿನ ಉಪವಾಸ ನೆರವೇರಿಸಿ ಇಂದು ಉಪವಾಸ ಮುರಿಯಲಾಗುತ್ತದೆ. ಸೌದಿಯಲ್ಲಿ ಈ ಬಾರಿ 30 ದಿನ ಉಪವಾಸ ಆಚರಿಸಲಾಗಿದೆ.

ಮಂಗಳೂರಿನಲ್ಲಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಶಾಂತಿಯ ಪ್ರತೀಕ ಪವಿತ್ರ ಹಬ್ಬವಾದ ಈದುಲ್ ಫಿತರ್ ನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಮತ್ತು ಉಳ್ಳಾಲ ಖಾಝಿ ತ್ವಾಕ ಉಸ್ತಾದ್ ಮತ್ತು ಕೂರತ್ ತಂಙಳ್ ತಿಳಿಸಿದ್ದಾರೆ.

ಪವಿತ್ರವಾದ ರಂಜಾನ್ ಉಪವಾಸ 29 ದಿನ ಪೂರ್ಣಗೊಳಿಸಿ ಕರಾವಳಿಯಾದ್ಯಂತ ಮುಸಲ್ಮಾನರು ಇಂದು ಈದುಲ್ ಫಿತರ್ ಹಬ್ಬವನ್ನು ಆಚರಿಸುತ್ತಿದ್ದಾರೆ.

ಕೇರಳ,ತಮಿಳು ನಾಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯೇ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮುಸಲ್ಮಾನರು ನೆರವೇರಿಸುತ್ತಿದ್ದಾರೆ.

ನಾಳೆ ಸರ್ಕಾರಿ ರಜೆ: ಕರಾವಳಿ ಭಾಗದಲ್ಲಿ ಇಂದು ರಂಜಾನ್ ಹಬ್ಬದ ಆಚರಣೆ ನಾಳೆ ಉಳಿದ ಭಾಗಗಳಲ್ಲಿ ಆಚರಣೆಯಿದ್ದು ನಾಳೆ ಸರ್ಕಾರಿ ರಜೆ ನೀಡಿರುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ರಂಜಾನ್ ಹಬ್ಬದ ಬಗ್ಗೆ ರಾಜ್ಯಾದ್ಯಂತ ನಾಳೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯಿಸುವಂತೆ ರಂಜಾನ್ ಹಬ್ಬದ ರಜೆಯನ್ನು ಜಿಲ್ಲಾಧಿಕಾರಿಗಳು ಸ್ಥಳೀಯ ಪರಿಸ್ಥಿತಿಗನುಸಾರವಾಗಿ ನಾಳೆಯ ಬದಲಿಗೆ ಇಂದು ಸಾರ್ವಜನಿಕ ರಜೆ ಘೋಷಿಸಲು ತಮ್ಮ ಹಂತದಲ್ಲಿಯೇ ನಿಯಮಾನುಸಾರ ತೀರ್ಮಾನ ತೆಗೆದುಕೊಳ್ಳುವಂತೆ ತಿಳಿಸಲು ನಿರ್ದೇಶಿಸಿರುತ್ತೇನೆ ಎಂದು ಸರ್ಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಇಂದು ರಂಜಾನ್ ಹಬ್ಬ ಹಿನ್ನೆಲೆ; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ: ಇಂದು ರಂಜಾನ್ ಹಬ್ಬ ಹಿನ್ನೆಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ‌ ಮಾಡಲಾಗಿದೆ. ಏ.11ರಂದು ಇದ್ದ ಸಾರ್ವತ್ರಿಕ ರಜೆಯನ್ನು ಏ.10ರಂದು ನೀಡಿ ದ.ಕ. ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಕರ್ನಾಟಕ ಸರಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ: 11-04-2024 ರಂದು ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿತ್ತು. ಏ. 9 ರಂದು ಚಂದ್ರ ದರ್ಶನವಾಗಿರುವುದರಿಂದ ಎ.11ರ ಬದಲಾಗಿ ದಿನಾಂಕ: ಏ.10 ಬುಧವಾರರಂದು ರಜೆ ಘೋಷಿಸಲು ಇರುವ ಸಾರ್ವಜನಿಕ ಬೇಡಿಕೆಯ ಹಿನ್ನಲೆಯಲ್ಲಿ ರಜೆಯನ್ನು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಏ.10 ಬುಧವಾರ ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಆದೇಶಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com