Elephant Attack: ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಭಕ್ತರ ಮೇಲೆ ಕಾಡಾನೆ ದಾಳಿ, ಮಹಿಳೆ ಸಾವು
ಚಾಮರಾಜನಗರ: ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಭಕ್ತರ ಮೇಲೆ ಕಾಡಾನೆ ದಾಳಿ ಮಾಡಿದ್ದು, ದಾಳಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ವರದಿಯಾಗಿದೆ.
ಚಾಮರಾಜನಗರದ ಹನೂರು ತಾಲ್ಲೂಕಿನ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಮಂಗಳವಾರ ಸಂಜೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಭಕ್ತರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲಿನ ಹೊನ್ನೇನಳ್ಳಿಯ ಲಕ್ಷ್ಮಿ (40) ಮೃತಪಟ್ಟವರಾಗಿದ್ದು, ಗ್ರಾಮದಿಂದ ಎಂಟು ಮಂದಿ ಬೆಟ್ಟಕ್ಕೆ ಬಂದಿದ್ದರು. ಈ ಪೈಕಿ ಲಕ್ಷ್ಮಿ, ಪದ್ಮಮ್ಮ, ಪುಟ್ಟರಾಜು ಅವರು ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಆನೆ ತಲೆದಿಂಬ ಸಮೀಪ ಕಾಡಾನೆ ಹಠಾತ್ ದಾಳಿ ಮಾಡಿದೆ. ಆನೆ ತುಳಿತಕ್ಕೆ ಒಳಗಾದ ಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ