SK Jain Death: ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ವಿಧಿವಶ

ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಇಂದು ವಿಧಿವಶರಾಗಿದ್ದಾರೆ.
ಎಸ್ ಕೆ ಜೈನ್
ಎಸ್ ಕೆ ಜೈನ್

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಇಂದು ವಿಧಿವಶರಾಗಿದ್ದಾರೆ.

ಅನಾರೋಗ್ಯ ಕಾರಣ 67 ವರ್ಷದ ಎಸ್ ಕೆ ಜೈನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎಸ್ ಕೆ ಜೈನ್ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಎಸ್ ಕೆ ಜೈನ್ ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಡಾ ಸುರೇಂದ್ರ ಕುಮಾರ್ ಜೈನ್ (ಎಸ್ ಕೆ ಜೈನ್) ಅವರು 1957ರ ಅಕ್ಟೋಬರ್ 13ರಂದು ಜನಿಸಿದ್ದರು. 2024ರ ಏಪ್ರಿಲ್ 12ರ ಸಂಜೆ 6:46ಕ್ಕೆ ಜೈನ್ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡದವರಾಗಿದ್ದು, ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ.

ಅವರಿಗೆ ಶ್ವಾಸಕೋಶದ ಸೋಂಕು ಇತ್ತು. ಶ್ವಾಸಕೋಶದಲ್ಲಿ ನೀರು ಶೇಖರಣೆಗೊಂಡು ದೇಹಕ್ಕೆಲ್ಲಾ ಹರಡಿತು. ಮಾರ್ಚ್ 18ರಂದು ಸಂಜೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಸಂತೋಷ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನಂತರ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಏಪ್ರಿಲ್ ಎರಡನೇ ವಾರದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ಆದರೆ ಮತ್ತೆ ಅಸ್ವಸ್ಥರಾಗಿದ್ದರಿಂದ ಅವರನ್ನು ನಾಲ್ಕು ದಿನಗಳ ಹಿಂದೆ ಭಗವಾನ್ ಮಹಾವೀನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಡಾ. ಸೈಯದ್ ಅಲ್ತಾಫ್ ಎಸ್ ಕೆ ಜೈನ್ ಅವರ ಮೇಲ್ವಿಚಾರಣೆ ಮಾಡುತ್ತಿದ್ದರು.

ಬಿಳಿರಕ್ತ ಕಣಗಳು ಕಡಿಮೆಯಾಗಿದ್ದು ಅಲ್ಲದೆ ಲೋ ಬಿಪಿ ಆಗಿದ್ದರಿಂದ ಸೋಂಕು ದೇಹದ ಇತರ ಭಾಗಗಳಿಗೆ ಹರಡಿ ಜೈನ್ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಜೈನ್ ಹಲವರ ಜೀವನವನ್ನು ರೂಪಿಸಿದರು. ಜ್ಯೋತಿಷಿ ಮಾರ್ಗದರ್ಶಕ ಶಕ್ತಿಯಾಗಿದ್ದರು. ಜೈನ್ ಯಾವಾಗಲೂ ಧನಾತ್ಮಕ ಚಿಂತನೆ ಹೊಂದಿದ್ದರು. ನೂರಾರು ಅನುಯಾಯಿಗಳು ಜೈನ್ ದರ್ಶನ ಪಡೆಯಲು ಆಸ್ಪತ್ರೆಗೆ ಬಂದಿದ್ದರು ಎಂದು ಹೇಳುತ್ತಾರೆ.

ಉದಯ ಟಿವಿಯಲ್ಲಿ ಜೈನ್ ಅವರ ಕಾಲಚಕ್ರ ಕಾರ್ಯಕ್ರಮವು 20 ವರ್ಷಗಳ ಕಾಲ ಪ್ರಸಾರವಾಗಿತ್ತು. ಇದು ಸ್ವತಃ ಒಂದು ದಾಖಲೆಯಾಗಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು, ಮಾಜಿ ಸಿಎಂ ಎಸ್‌ಎಂ ಕೃಷ್ಣ, ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಎನ್ ಧರಂ ಸಿಂಗ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಧರ್ಮಸ್ಥಳದ ಡಾ ವೀರೇಂದ್ರ ಹೆಡ್ಗೆ ಅವರು ಎಸ್ ಕೆ ಜೈನ್ ಜೊತೆ ವೈಯಕ್ತಿಕ ಬಾಂಧವ್ಯವನ್ನು ಹೊಂದಿದ್ದರು. ಬ್ರ್ಯಾಮ್ ಆಡಮ್ ಅವರಂತಹ ಅಂತಾರಾಷ್ಟ್ರೀಯ ಖ್ಯಾತನಾಮರು ಡಾ ಜೈನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

ಡಾ ಎಸ್ ಕೆ ಜೈನ್ ಅವರು ತಮ್ಮ ತಂದೆ ಶಶಿಕಾಂತ್ ಜೈನ್ ಅವರಿಂದ ಜ್ಯೋತಿಷ್ಯ ಮತ್ತು ಭವಿಷ್ಯ ಸಿದ್ದಿ ಪಡೆದುಕೊಂಡಿದ್ದರು. ಕಳೆದ 40 ವರ್ಷಗಳಿಂದ ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡುತ್ತಿದ್ದರು. ಯುಗಾದಿ ಸಮಯದಲ್ಲಿ ಕಾಲ ಚಕ್ರ ಎಫಿಸರ್ಮಿಸ್ ಪುಸ್ತಕವನ್ನು ಹೊರತರುತ್ತಾರೆ. ಇಸ್ಕಾನ್ ದೇವಸ್ಥಾನ ಮತ್ತು ಜಗನ್ನಾಥ ದೇವಸ್ಥಾನದ ಪ್ರಮುಖ ಸದಸ್ಯರಾಗಿದ್ದ ಅವರು ಭಗವದ್ಗೀತೆಯನ್ನು ಪ್ರಚಾರ ಮಾಡುತ್ತಿದ್ದರು.

ಡಾ.ಜೈನ್ ಅವರ ಕೊಡುಗೆಯನ್ನು ಗುರುತಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com