
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿದ್ದು, ಘಟನೆಯಲ್ಲಿ 22 ವರ್ಷದ ಯುವಕ ಗಾಯಗೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಶನಿವಾರ ತಿಳಿಸಿದೆ.
ಗಾಯಗೊಂಡ ರೈತನನ್ನು ಮನು ಎಂದು ಗುರುತಿಸಲಾಗಿದ್ದು, ಆತನ ಕುತ್ತಿಗೆ ಮತ್ತು ಕೈಗಳಿಗೆ ಗಾಯಗಳಾಗಿವೆ.
ಸದ್ಯ ಮನು ಆರೋಗ್ಯ ಸ್ಥಿರವಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಹೊನಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ 6.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಜಮೀನಿನಲ್ಲಿ ಕಾಣಿಸಿಕೊಂಡ ಹುಲಿ ಕೆಲ ಕಾಲ ಆತಂಕ ಸೃಷ್ಟಿ ಮಾಡಿತ್ತು. ಜನರ ಗುಂಪೊಂದು ತನ್ನ ಬಳಿಗೆ ಬಂದಾಗ ಸುಮಾರು ಎರಡು ವರ್ಷ ಪ್ರಾಯದ ಹುಲಿ ಮನು ಮೇಲೆ ದಾಳಿ ಮಾಡಿತು. ಹುಲಿಯನ್ನು ಓಡಿಸಲು ಪ್ರಯತ್ನಿಸಿದಾಗ ಅದು ಮನು ಮೇಲೆ ಹಾರಿ ಆತನ ಕುತ್ತಿಗೆ ಮತ್ತು ಕೈಗೆ ಬಲವಾಗಿ ಗಾಯಗೊಳಿಸಿದೆ. ನಂತರ ಹುಲಿ ಅರಣ್ಯ ಪ್ರದೇಶಕ್ಕೆ ಪರಾರಿಯಾಗಿದೆ.
Advertisement