MBBS ಪದವಿ ಪಡೆಯದ ದಂತ ವೈದರನ್ನು ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ: ಹೈಕೋರ್ಟ್‌

ಎಂಬಿಬಿಎಸ್‌ ಪದವಿ ಪಡೆಯದ ಹಿನ್ನೆಲೆಯಲ್ಲಿ ದಂತ ವೈದ್ಯರನ್ನು ರಾಜ್ಯ ಸರ್ಕಾರಿ ಸೇವೆಗಳ ಅಡಿ ಬರುವ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ ಎಂದು ಹೈಕೋರ್ಟ್‌ನ ಧಾರವಾಡ ಪೀಠ ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಎಂಬಿಬಿಎಸ್‌ ಪದವಿ ಪಡೆಯದ ಹಿನ್ನೆಲೆಯಲ್ಲಿ ದಂತ ವೈದ್ಯರನ್ನು ರಾಜ್ಯ ಸರ್ಕಾರಿ ಸೇವೆಗಳ ಅಡಿ ಬರುವ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ ಎಂದು ಹೈಕೋರ್ಟ್‌ನ ಧಾರವಾಡ ಪೀಠ ಆದೇಶಿಸಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕು ಆರೋಗ್ಯ ಕಚೇರಿಯ ವೈದ್ಯಾಧಿಕಾರಿಯಾಗಿ ತಮ್ಮನ್ನು ನಿಯೋಜಿಸಿದ್ದ ಆದೇಶ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಹಿರಿಯ ದಂತ ವೈದ್ಯಾಧಿಕಾರಿ ಡಾ.ವಿದ್ಯಾವತಿ ಯು. ಪಾಟೀಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ ಐ ಅರುಣ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.

ಸರ್ಕಾರ 2021ರ ಜೂನ್‌ 1ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ, ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅರ್ಹರಾಗಿರುತ್ತಾರೆ. 1992ರ ಜುಲೈ 17ರಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಹೊರಡಿಸಿದ ಅಧಿಸೂಚನೆ ಪ್ರಕಾರ ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಎಂಬಿಬಿಎಸ್‌ ಪದವಿ ಪಡೆದಿರಬೇಕು. ಪ್ರಕರಣದಲ್ಲಿ ಅರ್ಜಿದಾರರು ದಂತ ವೈದ್ಯರಾಗಿದ್ದು, ಎಂಬಿಬಿಎಸ್‌ ಪದವಿ ಪಡೆದಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಮತ್ತು ಹಿರಿಯ ದಂತ ವೈದ್ಯ ಆರೋಗ್ಯ ಅಧಿಕಾರಿ, ರಾಜ್ಯ ಸರ್ಕಾರ ಸೇವೆಗಳ ಅಡಿಯಲ್ಲಿ ಬರುವ ಹುದ್ದೆಗಳಾಗಿವೆ. ಹಿರಿಯ ದಂತ ಆರೋಗ್ಯ ಅಧಿಕಾರಿಯು ಬಿಡಿಎಸ್‌ ಪದವೀಧರರು. ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಎಂಬಿಬಿಎಸ್‌ ಪದವೀಧರರು. ಈ ಹುದ್ದೆಗಳು ಬಿಟ್ಟು ಕರ್ನಾಟಕ ಸಿವಿಲ್‌ ಸೇವೆಗಳು (ವೈದ್ಯಕೀಯ ಅಧಿಕಾರಿಗಳೂ ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಕಾಯಿದೆ-2011ರ ಸೆಕ್ಷನ್‌ 2(ಜಿ) ಅಡಿಯ ಶೆಡ್ಯೂಲ್‌-1 ಅಡಿಯಲ್ಲಿ ಇತರೆ ಅಧಿಕಾರಿಗಳ ಹುದ್ದೆಗಳು ಇವೆ. ಅವರೆಲ್ಲರೂ ಆರೋಗ್ಯ ಅಧಿಕಾರಿಗಳಾಗಿಯೇ ಪರಿಗಣಿಸಲ್ಪಡುತ್ತಾರೆ. ಆದರೆ, ಅವರು ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ಗಳು ಅಲ್ಲ. ಇದು ಪ್ರತ್ಯೇಕ ಕೆಟಗರಿಯಾಗಿದೆ. ಅವರು ವೈದ್ಯಾಧಿಕಾರಿಗಳಾಗಿಯೇ ಪರಿಗಣಿಸಲ್ಪಡುತ್ತಾರೆ ಎಂದು ಪೀಠ ಹೇಳಿದೆ.

ಸಂಗ್ರಹ ಚಿತ್ರ
ಡಿಕೆಶಿ ವಿರುದ್ದದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಇ ಡಿ ಪ್ರಕರಣ ರದ್ದತಿ ಪರಿಣಾಮ ಬೀರದು: ಹೈಕೋರ್ಟ್'ಗೆ ಸಿಬಿಐ

ಅರ್ಜಿದಾರರು ಎಂಬಿಬಿಎಸ್‌ ಪದವೀಧರರಲ್ಲ. ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಆಗಿ ಅವರನ್ನು ಪರಿಗಣಿಸಲಾಗದು. ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅವರು ಅರ್ಹರಲ್ಲ. ಹೀಗಾಗಿ, ಕುಂದಗೋಳ ತಾಲ್ಲೂಕು ಆರೋಗ್ಯ ಅಧಿಕಾರಿಯಾಗಿ ಅರ್ಜಿದಾರರನ್ನು ನಿಯೋಜನೆ ಮಾಡಿರುವುದು ತಪ್ಪು. ಅದನ್ನು ಅರಿತುಕೊಂಡೇ ಸರ್ಕಾರ ತನ್ನ ಆದೇಶ ಹಿಂಪಡೆದುಕೊಂಡಿದೆ ಎಂದು ಪೀಠ ಆದೇಶಿಸಿದೆ.

ಕೆಎಟಿ ಆದೇಶವು ದೋಷಪೂರಿತವಾಗಿದ್ದು, ಆ ಆದೇಶವನ್ನು ರದ್ದುಪಡಿಸಬೇಕು. ಕುಂದಗೊಳ ತಾಲ್ಲೂಕು ಕಚೇರಿ ವೈದ್ಯಾಧಿಕಾರಿಯಾಗಿ ನಿಯೋಜಿಸಿದ್ದ ಕ್ರಮ ಹಿಂಪಡೆದ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಈ ವಾದ ಆಕ್ಷೇಪಿಸಿದ್ದ ಸರ್ಕಾರ ವಕೀಲರು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು. ಕೆಎಟಿ ಆದೇಶದಲ್ಲಿ ಯಾವುದೇ ತಪ್ಪು ಕಂಡು ಬರುತ್ತಿಲ್ಲ ಎಂದು ತಿಳಿಸಿದ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರರ ಪರ ವಕೀಲರು, ವಿದ್ಯಾವತಿ ಕ್ಲಾಸ್‌-1 (ಗ್ರೂಪ್‌ ಎ) ಅಧಿಕಾರಿ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕುಂದಗೋಳ ತಾಲ್ಲೂಕು ಆರೋಗ್ಯಾಧಿಕಾರಿ ಹುದ್ದೆಯಿಂದ 2023ರ ಜನವರಿ 2ರಿಂದ ಮೂರು ವರ್ಷದವರೆಗೆ ಅವರನ್ನು ವರ್ಗಾವಣೆ ಮಾಡುವಂತಿರಲಿಲ್ಲ. ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ವೈದ್ಯಕೀಯ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಕಾಯಿದೆ-2011ರ ನಿಯಮಗಳ ಅನುಸಾರ ಅರ್ಜಿದಾರರು ವೈದ್ಯಾಧಿಕಾರಿಯಾಗಿದ್ದಾರೆ. ಅದರಂತೆ ಅವರು ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅರ್ಹರಾಗಿದ್ದಾರೆ ಎಂದು ವಾದಿಸಿದ್ದರು.

ಅರ್ಜಿದಾರರು ದಂತ ವೈದ್ಯರಾಗಿದ್ದು, ಸರ್ಕಾರಿ ಉದ್ಯೋಗಿಯಾಗಿದ್ದಾರೆ. 2023ರ ಜನವರಿ 2ರಂದು ಕುಂದಗೋಳ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ವರ್ಗಾವಣೆಯಾಗಿದ್ದರು. ಆದರೆ, ಅದು ಅವಧಿಪೂರ್ವ ವರ್ಗಾವಣೆ ಎಂಬ ಕಾರಣಕ್ಕೆ ವರ್ಗಾವಣೆ ಆದೇಶವನ್ನು 2023ರ ಸೆಪ್ಟೆಂಬರ್‌ 8ರಂದು ರದ್ದುಪಡಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅರ್ಹತೆ ಹೊಂದಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿ ಕೆಎಟಿ 2023ರ ಜನವರಿ 24ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಮೇಲ್ಮವಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com