ರಾಜ್ಯದಲ್ಲಿ PM ಪ್ರಚಾರ, ಚೊಂಬು ಪ್ರದರ್ಶಿಸಿ 'ಕೈ' ಪ್ರತಿಭಟನೆ, ಡ್ರಗ್ಸ್ ಪೆಡ್ಲರ್ ಗಳಿಂದ ಪೊಲೀಸರ ಮೇಲೆ ಹಲ್ಲೆ! ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ FIR: ಈ ದಿನದ ಸುದ್ದಿ ಮುಖ್ಯಾಂಶಗಳು-20-04-2024

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು 6 ದಿನಗಳಷ್ಟೇ ಇದ್ದು, ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು- ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿಗಳ ಪರ ಇಂದು ಪ್ರಚಾರ ನಡೆಸಿದರು.
ರಾಜ್ಯದಲ್ಲಿ PM ಪ್ರಚಾರ, ಚೊಂಬು ಪ್ರದರ್ಶಿಸಿ 'ಕೈ' ಪ್ರತಿಭಟನೆ, ಡ್ರಗ್ಸ್ ಪೆಡ್ಲರ್ ಗಳಿಂದ ಪೊಲೀಸರ ಮೇಲೆ ಹಲ್ಲೆ! ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ FIR: ಈ ದಿನದ ಸುದ್ದಿ ಮುಖ್ಯಾಂಶಗಳು-20-04-2024

1. ಬೆಂಗಳೂರು-ಚಿಕ್ಕಬಳ್ಳಾಪುರದಲ್ಲಿ ಮೋದಿ ಭರ್ಜರಿ ಪ್ರಚಾರ, ಮಾಜಿ ಪ್ರಧಾನಿ ದೇವೇಗೌಡ ಸಾಥ್

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು 6 ದಿನಗಳಷ್ಟೇ ಇದ್ದು, ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು- ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿಗಳ ಪರ ಇಂದು ಪ್ರಚಾರ ನಡೆಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕಿಸಾನ್ ಸಮ್ಮಾನ್‌ ಹಣದ ಜತೆಗೆ 2,000 ರೂ. ಸೇರಿಸಿ 4,000 ರೂಪಾಯಿಯನ್ನು ರೈತರಿಗೆ ನೀಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಸ್ಥಗಿತಗೊಳಿಸಲಾಗಿದೆ. ರೈತ ವಿರೋಧಿ ಕಾಂಗ್ರೆಸ್ಗೆ ಇಲ್ಲಿನ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೋದಿ ಹೇಳಿದರು. ಸಭೆಯಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, INDIA ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 10 ವರ್ಷಗಳಿಂದ ಸರಿಯಾದ ವಿಪಕ್ಷ ನಾಯಕನನ್ನು ಪಡೆಯಲು ಯೋಗ್ಯತೆ ಇಲ್ಲದ ಕಾಂಗ್ರೆಸ್, ಮೋದಿ ಅವರನ್ನ ಸೋಲಿಸಬೇಕು ಅಂದುಕೊಂಡಿದೆ ಎಂದು ಲೇವಡಿ ಮಾಡಿದ್ದಾರೆ.

2. ಚೊಂಬು ಪ್ರದರ್ಶಿಸಿ ರಾಜ್ಯಕ್ಕೆ ಮೋದಿ ಭೇಟಿ ಟೀಕಿಸಿದ ಕಾಂಗ್ರೆಸ್

ಇದೇ ವೇಳೆ ಕೆಪಿಸಿಸಿಯಿಂದ ವಿವಿಧ ಪತ್ರಿಕೆಗಳಿಗೆ ನೀಡಲಾದ `ಚೊಂಬು’ ಜಾಹೀರಾತಿನ ಕುರಿತು ಪ್ರಸ್ತಾಪಿಸಿದ ಗೌಡರು, ಈ ಚೊಂಬನ್ನು 10 ವರ್ಷ ಮನಮೋಹನ್ ಸಿಂಗ್ ಕೊಟ್ಟಿದ್ದು ಎಂದು ಆರೋಪ ಮಾಡಿದ್ದು, ಬರಿದಾದ ಚೊಂಬನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ. ಇನ್ನು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕರು, ಎಐಸಿಸಿ ಪ್ರಧಾನಕಾರ್ಯದರ್ಶಿ ರಣ್ ದೀಪ್ ಸಿಂಗ್ ಸುರ್ಜೆವಾಲ ನೇತೃತ್ವದಲ್ಲಿ ಚೊಂದು ಪ್ರದರ್ಶಿಸಿ ಪ್ರತಿ ಪ್ರತಿಭಟನೆ ನಡೆಸಿದರು.

3. ನೇಹಾ ಹಿರೇಮಠ್ ಕೊಲೆ ಪ್ರಕರಣದ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ವಿಷಾದ

ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಹಿರೇಮಠ್ ಕೊಲೆ ಮಾಡಿದ ಯುವಕನನ್ನು ಪ್ರೀತಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗತೊಡಗಿದೆ. ಪರಮೇಶ್ವರ್ ಹೇಳಿಕೆ ಖಂಡಿಸಿ, ಪರಮೇಶ್ವರ್ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಹಲವರನ್ನು ವಶಕ್ಕೆ ಪಡೆಯಲಾಯಿತು. ಈ ಮಧ್ಯೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಪರಮೇಶ್ವರ್, ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಆದರೆ, ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ಬೇಸರವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ. ಸತ್ಯವನ್ನು ಯಾವತ್ತೂ ಮುಚ್ಚಿಡಲು ಸಾಧ್ಯವಿಲ್ಲ. ತನಿಖೆ ಬಳಿಕ ಎಲ್ಲಾ ವಿಷಯ ಹೊರಬರುತ್ತೆ. ನಮಗೆ ಬಂದಿರುವ ವರದಿ ಪ್ರಕಾರ ಮಾತಾಡಿದ್ದೇವೆ ಎಂದು ಹೇಳಿದರು.

4. ಮೋದಿ ಪರ ಹಾಡು ಬರೆದಿದ್ದ ಯುವಕನಿಗೆ ಥಳಿತ!

ಪ್ರಧಾನಿ ಮೋದಿ ಪರ ಹಾಡು ಬರೆದಿದಕ್ಕೆ ಮೈಸೂರಿನಲ್ಲಿ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ರೋಹಿತ್ ಎಂಬ ಯುವಕ ಥಳಿತಕ್ಕೊಳಗಾಗಿದ್ದು, ಸರ್ಕಾರಿ ಅತಿಥಿ ಗೃಹದ ಬಳಿ ಹಲ್ಲೆ ನಡೆಸಿದ್ದ ಗುಂಪು ಮೋದಿ ಕುರಿತು ಹಾಡು ಮಾಡಿದ್ದೀಯಾ, ನಿನ್ನ ಸಾಯಿಸುತ್ತೇವೆಂದು ಬೆದರಿಕೆ ಹಾಕಿದ್ದಲ್ಲದೆ, ಪಾಕಿಸ್ತಾನ ಹಾಗೇ ಅಲ್ಲಾಹು ಅಕ್ಬರ್ ಘೋಷಣೆ ಕೂಗುವಂತೆ ಒತ್ತಾಯಿಸಿದರು ಎಂದು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

5. ಡ್ರಗ್ಸ್ ಪೆಡ್ಲರ್ ಗಳಿಂದ ಪೊಲೀಸರ ಮೇಲೆ ಹಲ್ಲೆ!

ಡ್ರಗ್‌ ಪೆಡ್ಲರ್‌ ಇರುವಿಕೆ ಕುರಿತು ಪರಿಶೀಲನೆಗೆ ತೆರಳಿದ್ದ ಪೊಲೀಸರ ಮೇಲೆಯೇ ನೈಜೀರಿಯಾ ಪ್ರಜೆಗಳು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಮಾವಳ್ಳಿಪುರದಲ್ಲಿ ವರದಿಯಾಗಿದೆ. ಘಟನೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಹೆಡ್ ಕಾನ್ ಸ್ಟೇಬರ್ ರಾಜೀವ್ ಗಾಯಗೊಂಡಿದ್ದು, ಕೊಡಿಗೇಹಳ್ಳಿ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಸಿಸಿಬಿ ಪೊಲೀಸರ ಜೀಪು ಹಾಗೂ ರಾಜಾನುಕುಂಟೆ ಠಾಣೆ ಹೊಯ್ಸಳ ವಾಹನ ಜಖಂಗೊಂಡಿದೆ.

6. ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ FIR 

ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಎಂ.ಸಿ ಯಾರ್ಡ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಯಶವಂತಪುರದ ಗೋಲ್ಡನ್ ಗ್ರಾಂಡ್ ಅಪಾರ್ಟ್ಮೆಂಟ್ ಸೇರಿ ವಿವಿಧೆಡೆ ಸಹೋದರ ಡಿ.ಕೆ ಸುರೇಶ್ ಪರ ಡಿ.ಕೆ.ಶಿವಕುಮಾರ್ ಮತಯಾಚಿಸಿದ್ದರು. ಈ ವೇಳೆ, ನಮ್ಮ ಮೇಲೆ ವಿಶ್ವಾಸವಿರಿಸಿದರೆ, ನಾವು ಮುಂದೆ ನಿಂತು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ದಿಲ್ಲಿಯಿಂದ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದ್ದರು. ಡಿಸಿಎಂ ಮತದಾರರಿಗೆ ಆಮಿಷವೊಡ್ಡಿ ಹಾಗೂ ಅನಾನುಕೂಲದ ಒತ್ತಡ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com