ಲೋಕಸಭೆ ಚುನಾವಣೆ 2024: ಬೆಂಗಳೂರಿನಲ್ಲಿ ಏ.24 ಸಂಜೆ 6 ರಿಂದ 144 ಸೆಕ್ಷನ್​ ಜಾರಿ, ಬಹಿರಂಗ ಪ್ರಚಾರಕ್ಕೆ ಬ್ರೇಕ್, ಮದ್ಯ ಮಾರಾಟ ಬಂದ್​

ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್
ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್

ಬೆಂಗಳೂರು: ಲೋಕಸಭೆ ಚುನಾವಣೆ-2024ಕ್ಕೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನೆರಡು ದಿನ ಬಾಕಿ ಉಳಿದಿದೆ. ಮೊದಲ ಹಂತದಲ್ಲಿ ಏಪ್ರಿಲ್‌ 26 ರಂದು 14 ಕ್ಷೇತ್ರಗಳಿಗೆ, ಎರಡನೇ ಹಂತದಲ್ಲಿ ಮೇ 7 ರಂದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಜೂನ್‌ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಿದ್ಧತೆ: ರಾಜಧಾನಿ ಬೆಂಗಳೂರಿನ ಎಂಟು ವಿಭಾಗಗಳಲ್ಲಿ ಪೊಲೀಸ್​ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಐದು ಲೋಕಸಭಾ ಕ್ಷೇತ್ರಗಳು ನಮ್ಮ ವ್ಯಾಪ್ತಿಗೆ ಬರುತ್ತವೆ. ಬೆಂಗಳೂರಿನಲ್ಲಿ ಮತದಾನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ ಅಂದರೆ ಏಪ್ರಿಲ್ 24ರ ಸಂಜೆ 6ರಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ 144 ಸೆಕ್ಷನ್​ ಜಾರಿ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ನಗರದಲ್ಲಿ ಮಾಡಿಕೊಂಡಿರುವ ಚುನಾವಣೆ ಸಿದ್ಧತೆ ಕುರಿತು ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​ ಮತ್ತು ಪೊಲೀಸ್​ ಆಯುಕ್ತ ದಯಾನಂದ್​ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು. ಈ ವೇಳೆ ಮಾತನಾಡಿದ ಪೊಲೀಸ್​ ಆಯುಕ್ತ ದಯಾನಂದ್​, ನಿಷೇಧಾಜ್ಞೆ ವೇಳೆ ಯಾವುದೇ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಐದಕ್ಕು ಹೆಚ್ಚು ಜನರು ಒಂದೇ ಕಡೆ ಸೇರುವಂತಿಲ್ಲ. ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆಗೂ ಅವಕಾಶ ಇರುವುದಿಲ್ಲ. ನಾಳೆ ಸಂಜೆ 6ರಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧವಿರುತ್ತದೆ. ಮುಕ್ತ, ನಿರ್ಭೀತ ಮತದಾನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ನಗರದ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನ ಭದ್ರತೆಗೆ ಬಳಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ 13 ಸಾವಿರಕ್ಕೂ ಅಧಿಕ ಪೊಲೀಸರು, 11 ಸಿಆರ್​​ಪಿಎಫ್​, 14 ಕೆಎಸ್​ಆರ್​ಪಿ, 40 CAR​ ತುಕಡಿಯನ್ನು ನಿಯೋಜಿಸಲಾಗುತ್ತದೆ ಎಂದರು.

ಬೆಳಗ್ಗೆ 7ರಿಂದ ಮತದಾನ: ಏಪ್ರಿಲ್​ 26 ರಂದು ಬೆಳಗ್ಗೆ 7 ರಿಂದ ಮತದಾನ ಪ್ರಾರಂಭವಾಗುತ್ತದೆ. ಮತದಾರರ ಮೇಲೆ ಆಮಿಷವೊಡ್ಡುವ ಸಾಧ್ಯತೆಯಿರುವುದರಿಂದ ನಗರದಾದ್ಯಂತ ಹದ್ದಿನ ಕಣ್ಣಿಡಲಿದ್ದೇವೆ. ಮತದಾನದ ಪ್ರಾಮುಖ್ಯತೆ ಕಾಪಾಡಬೇಕಿದೆ. ಇವತ್ತು ಅದೇ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​ , ನಗರ ಪೊಲೀಸರು ಸೇರಿದಂತೆ ವಿವಿಧ ಇಲಾಖೆ ಜೊತೆಗೆ ಸಭೆ ನಡೆಸಲಾಗಿದೆ. 72 ಗಂಟೆ ಹೇಗೆ ಆ್ಯಕ್ಟಿವ್ ಆಗಿರಬೇಕು ಎಂದು ಚರ್ಚೆ ನಡೆಸಲಾಗಿದೆ. ಬ್ಯಾಂಕ್ ಮಾಹಿತಿ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಚರ್ಚೆ ನಡೆಸಲಾಗಿದೆ. ಸಂಶಯಾಸ್ಪದ ವಸ್ತುಗಳು ಕಂಡು ಬಂದರೆ ತಪಾಸಣೆ ಮಾಡುತ್ತೇವೆ. ಬೆಂಗಳೂರಿನಲ್ಲಿ 1 ಕೋಟಿ 20 ಸಾವಿರದಷ್ಟು ಮತದಾರರಿದ್ದಾರೆ. 64 ಕೋಟಿ 87 ಲಕ್ಷ ಇದುವರೆಗೆ ಸೀಜ್ ಆಗಿದೆ. ಇದೆಲ್ಲವನ್ನು ಐಟಿ ಇಲಾಖೆಗೆ ಮಾಹಿತಿ ಕೊಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 5 ಲೋಕಸಭಾ ಕ್ಷೇತ್ರಗಳಿವೆ ಎಂದರು.

ಬೆಂಗಳೂರಿನಲ್ಲಿ ಸೂಕ್ಷ್ಮ ಮತಗಟ್ಟೆ ಸಂಖ್ಯೆ – 1737, ಸಾಮಾನ್ಯ ಮತಗಟ್ಟೆ ಸಂಖ್ಯೆ – 6351, ಒಟ್ಟು ಮತಗಟ್ಟೆ – 8088, ಒಟ್ಟು ಮತಗಟ್ಟೆ ಕೇಂದ್ರ – 2564, ಸೆಕ್ಟರ್ ಮೊಬೈಲ್ – 416, ಸೂಪರ್ ವೈಸರಿ ಮೊಬೈಲ್ – 118, ಸಬ್ ಡಿವಿಷನ್ ಮೊಬೈಲ್ – 5 ಮತಗಟ್ಟೆಗಳಿವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com