ಲೋಕಸಭಾ ಚುನಾವಣೆ 2024: ಬೆಂಗಳೂರು ಸೇರಿದಂತೆ 14 ಕ್ಷೇತ್ರಗಳಲ್ಲಿ ನಾಳೆ ಮತದಾನ; 2.88 ಕೋಟಿ ಮತದಾರರು ಅರ್ಹರು!

ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ (ಏ.26) ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಸಂಪೂರ್ಣ ಸಿದ್ಧತೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ (ಏ.26) ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಸಂಪೂರ್ಣ ಸಿದ್ಧತೆಯಾಗಿದೆ.

ಈ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 1.40 ಲಕ್ಷ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 2,88,19,342 ಕೋಟಿ ಮತದಾರರು ಹಕ್ಕು ಚಲಾವಣೆಗೆ ಕಾತುರರಾಗಿದ್ದಾರೆ.

ಚುನಾವಣಾ ಸಿದ್ಧತೆ ಕುರಿತು ನಗರದಲ್ಲಿಬುಧವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್‌ ಮೀನಾ ಅವರು, ಮೊದಲ ಹಂತದಲ್ಲಿ ಚುನಾವಣಾ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತದಾನ ಮುಕ್ತಾಯವಾಗುವ 48 ತಾಸಿಗೂ ಮುನ್ನ ಶೂನ್ಯ ಅವಧಿ ಘೋಷಿಸಲಾಗಿದೆ. ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು, ಪಕ್ಷದ ಮುಖಂಡರು ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿಬುಧವಾರ ಸಂಜೆಯಿಂದಲೇ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ ಮತ್ತು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಸಂಗ್ರಹ ಚಿತ್ರ
ಲೋಕಸಭೆ ಚುನಾವಣೆ 2024: 'ಚೊಂಬು' ಜಾಹೀರಾತಿಗೆ ಕೆರಳಿದ ಬಿಜೆಪಿ, ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಮತದಾರರಲ್ಲದ ರಾಜಕೀಯ ಮುಖಂಡರು, ಪಕ್ಷಗಳ ಕಾರ್ಯಕರ್ತರಿಗೆ ಕ್ಷೇತ್ರದಿಂದ ಹೊರಹೋಗಲು ಸೂಚಿಸಲಾಗಿದೆ. ಬಾಹ್ಯ ವ್ಯಕ್ತಿಗಳು ಅನಧಿಕೃತವಾಗಿ ಕ್ಷೇತ್ರಗಳಲ್ಲಿ ವಾಸ್ತವ್ಯ ಹೂಡಿರುವ ಸಂಬಂಧ ಸಿಬ್ಬಂದಿ ಪರಿಶೀಲನೆ ಆರಂಭಿಸಿದ್ದಾರೆ. ಮುಂದಿನ ಎರಡು ದಿನಗಳು ನಿರ್ಣಾಯಕವಾಗಿದ್ದು, ಚುನಾವಣಾ ಅಕ್ರಮಗಳ ಮೇಲೆ ತೀವ್ರ ನಿಗಾ ವಹಿಸಿದ್ದೇವೆ. ಸುಮಾರು 50 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ ಒಟ್ಟು 14 ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 2,88,19,342 ಮತದಾರರಿದ್ದು, ಈ ಪೈಕಿ 1,44,28,099 ಪುರುಷರು, 1,43,88,176 ಮಹಿಳೆಯರು ಮತ್ತು 3,067 ತೃತೀಯಲಿಂಗಿಗಳು ಇದ್ದಾರೆ ಎಂದು ತಿಳಿಸಿದರು.

ಇದೇ ವೇಳ ಚುನವಣೆ ಆ್ಯಪ್ ನ್ನೂ ಬಿಡುಗಡೆ ಮಾಡಿದರು. ಆ್ಯಪ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು, ನಾಗರಿಕರು ತಮ್ಮ ಮತಗಟ್ಟೆಗಳನ್ನು ಹುಡುಕಲು ಇದನ್ನು ಡೌನ್‌ಲೋಡ್ ಮಾಡಬಹುದು. ಇದು ಮತದಾರರಿಗೆ ತಮ್ಮ ಬೂತ್‌ನಲ್ಲಿರುವ ಸರದಿಯ ಸ್ಥಿತಿಯನ್ನು ತಿಳಿಸುತ್ತದೆ ಮತ್ತು ಅವರಿಗೆ ಪಾರ್ಕಿಂಗ್ ಸ್ಥಳಗಳನ್ನೂ ತೋರಿಸುತ್ತದೆ.

ಚುನಾವಣೆಗೆ ಒಟ್ಟು 1,39,495 ಚುನಾವಣಾಧಿಕಾರಿಗಳು ಮತ್ತು 5,000 ಸೂಕ್ಷ್ಮ ವೀಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಒಟ್ಟಾರೆಯಾಗಿ, 30,602 ಮತಗಟ್ಟೆಗಳಲ್ಲಿ 65 ಅರೆಸೇನಾ ಪಡೆಗಳು ಮತ್ತು 50,000 ಪೊಲೀಸ್ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 19,701 ಬೂತ್‌ಗಳಲ್ಲಿ ವೆಬ್‌ಕಾಸ್ಟಿಂಗ್ ನಡೆಯಲಿದ್ದು, 1,370 ಬೂತ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಸಂಗ್ರಹ ಚಿತ್ರ
ಪ್ರಚೋದನೆಗೆ ಒಳಗಾಗದೆ, ಸ್ವಂತ ವಿವೇಚನೆಯಿಂದ ಮತ ಚಲಾಯಿಸಿ: ತುಷಾರ್ ಗಿರಿನಾಥ್

ಜನರ ಎಡಗೈ ತೋರುಬೆರಳಿಗೆ ಶಾಯಿ ಹಾಕಲಾಗುವುದು. ಬೂತ್‌ಗಳು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ತೆರೆದಿರುತ್ತವೆ.

ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಹೆಚ್ಚಿನ ತಾಪಮಾನದ ಕಾರಣ, ಜನರಿಗೆ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶವಿರುತ್ತದೆ. ವ್ಯಾಪಾರ ಉದ್ಯಮಗಳು, ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳಿಗೆ ಏಪ್ರಿಲ್ 26 ರಂದು ಪಾವತಿಸಿದ ರಜೆಯನ್ನು ಮಂಜೂರು ಮಾಡಲು ನಿರ್ದೇಶಿಸಲಾಗಿದೆ. QR ಕೋಡ್‌ಗಳೊಂದಿಗೆ ಶೇ.90 ಕ್ಕಿಂತ ಹೆಚ್ಚು ವೋಟರ್ ಸ್ಲಿಪ್‌ಗಳನ್ನು ಮತದಾರರಿಗೆ ವಿತರಿಸಲಾಗಿದೆ. ಮತದಾರರು ಒಮ್ಮೆ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಅದು ಮತದಾರ ತನ್ನ ಬೂತ್‌ಗೆ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಈ ಪ್ರಯೋಗ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಯಶಸ್ವಿಯಾಗಿತ್ತು.

ಬಿಸಿಲ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿ ಮತಗಟ್ಟೆಯಲ್ಲೂ ವೈದ್ಯಕೀಯ ಸಲಕರಣೆಗಳ ಕಿಟ್‌ನ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಮತಗಟ್ಟೆ ಸಿಬ್ಬಂದಿ ಅಥವಾ ಮತದಾರರಿಗೆ ಬಿಸಿಲಾಘಾತವಾದರೆ ತಕ್ಷಣವೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕ್ಲಸ್ಟರ್‌ಗಳಲ್ಲಿ ಆಂಬ್ಯುಲೆನ್ಸ್‌, ನೀರು ಆಸನ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com