
ರಾಮನಗರ: ಈಜಲು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ರಾಮನಗರ ಜಿಲ್ಲೆಯ ಮೇಕೆದಾಟಿನಲ್ಲಿ ನಡೆದಿದೆ.
ಬೆಂಗಳೂರಿನ ಖಾಸಗಿ ಕಾಲೇಜಿನ ಐವರು ವಿದ್ಯಾರ್ಥಿಗಳು ಮೇಕೆದಾಟು ಸಂಗಮದಲ್ಲಿ ಈಜಲು ಹೋದವರು ನಾಪತ್ತೆಯಾಗಿದ್ದರು. ಇದೀಗ ಐವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪೀಣ್ಯ ಎರಡನೇ ಹಂತದ ಹರ್ಷಿತ(20), ಅಭಿಷೇಕ್(20), ತೇಜಸ್(21), ವರ್ಷಾ(20) ಹಾಗೂ ಸ್ನೇಹ(19) ಮೃತರು. ಮೇಕೆದಾಟು ಬಳಿ ಆಳವಾದ ಜಾಗದಲ್ಲಿ ಈಜುವಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.
ಕಾವೇರಿ ನದಿಯಿಂದ ಐವರು ವಿದ್ಯಾರ್ಥಿಗಳ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹೊರತೆಗೆದಿದ್ದಾರೆ. ಕನಕಪುರ ಗ್ರಾಮಾಂತರ ಠಾಣೆ ಪೊಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಿಂದ ಒಟ್ಟು 12 ವಿದ್ಯಾರ್ಥಿಗಳ ಇಲ್ಲಿಗೆ ಬಂದಿದ್ದರು. ಈ ಪೈಕಿ ಐವರು ಈಜುತ್ತಿದ್ದ ವೇಳೆ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾರೆ. ಉಳಿದ ಏಳು ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ನೀರಿನಲ್ಲಿ ಮುಳುಗಿದ ನಂತರ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement