
ಬೆಂಗಳೂರು: ಆಸ್ತಿ ತೆರಿಗೆ ಸುಸ್ತಿದಾರರಿಗಾಗಿ ಜಾರಿಗೆ ತರಲಾಗಿದ್ದ ‘ಒಂದು ಬಾರಿ ಪರಿಹಾರ ಯೋಜನೆ’ (ಒಟಿಎಸ್)ಯ ಕಾಲಾವಧಿ (ಜುಲೈ 31)ಯನ್ನು ಒಂದು ತಿಂಗಳ ಕಾಲ (ಆಗಸ್ಟ್ 31) ವಿಸ್ತರಣೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದರು.
11ನೇ ನ್ಯಾನೋ ತಂತ್ರಜ್ಞಾನ ಅಂತಾರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ 3 ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಹೆಚ್ಚುವಾರಿಯಾಗಿ 400 ಕೋಟಿ ತೆರಿಗೆ ಸಂಗ್ರಹವಾಗಿದೆ. ಕೆಲ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಒಟಿಎಸ್ ಕಾಲಾವಧಿ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಕೆಲವರು ಚೆಕ್ ನೀಡಿದ್ದು, ಸರ್ವರ್ ಸಮಸ್ಯೆ ಕಂಡು ಬಂದಿದೆ. ಹೀಗಾಗಿ ಜುಲೈ 31ರವರೆಗೆ ನೀಡಲಾಗಿದ್ದ ಕಾಲಾವಧಿಯನ್ನು ಒಂದು ತಿಂಗಳ ಕಾಲ ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದರು.
ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿರುವವರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗುವುದು. ಒಂದು ವೇಳೆ ಯಾರಾದರೂ ಹೆಚ್ಚಿಗೆ ಹಣ ಪಾವತಿ ಮಾಡಿದ್ದರೆ, ಮುಂದಿನ ಬಾರಿ ಆಸ್ತಿ ತೆರಿಗೆ ಪಾವತಿ ವೇಳೆ ಅದನ್ನು ವಜಾಗೊಳಿಸಲಾಗುವುದು. ಈ ವಿಚಾರದಲ್ಲಿ ಅನಗತ್ಯವಾಗಿ ಗಾಬರಿಯಾಗುವುದು ಬೇಡ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಜನಾಂದೋಲನ ಯಾತ್ರೆ ಬಗ್ಗೆ ಮಾತನಾಡಿ, ಬಿಜೆಪಿಯ ಪಾದಯಾತ್ರೆಗೆ ಅರ್ಥ ಅಥವಾ ವಿಷಯ ಯಾವುದೂ ಇಲ್ಲ. ಅವರ ಪಾದಯಾತ್ರೆ ವಿಚಾರ ಏನು? ಅವರು ಮಾಡಿರುವ ಹಗರಣಗಳನ್ನು ಬಯಲು ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದಾದರೂ ಹೊಸ ಹಗರಣಗಳಿದ್ದರೆ ಅವರು ಹೇಳಲಿ. ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದರೆ ಅದು ಬಿಜೆಪಿ ಸರ್ಕಾರ. ಹೀಗಾಗಿ ನಾವು ಅವರ ಕಾಲದ ಹಗರಣಗಳ ಬಗ್ಗೆ, ಬಜೆಟ್ ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಪ್ರತಿನಿತ್ಯ ಮೂರ್ನಾಲ್ಕು ಪ್ರಶ್ನೆ ಕೇಳುತ್ತೇವೆ, ಅವರು ಉತ್ತರ ನೀಡಲಿ ಎಂದು ಸವಾಲೆಸೆದರು
Advertisement