ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6,626 ಸಮುದ್ರ ಕುದುರೆಗಳೊಂದಿಗೆ ತಮಿಳುನಾಡಿನ ಮೂವರನ್ನು ಬಂಧಿಸುವ ಮೂಲಕ ಕಂದಾಯ ಗುಪ್ತಚರ ನಿರ್ದೇಶನಾಲಯವು ಒಣಗಿದ ಸಮುದ್ರ ಕುದುರೆಗಳ ಕಳ್ಳಸಾಗಣೆ ದಂಧೆಯನ್ನು ಭೇದಿಸಿದೆ.
ಇದರೊಂದಿಗೆ ಒಣಗಿದ ಸಮುದ್ರ ಕುದುರೆಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಕಳ್ಳಸಾಗಣೆ ಜಾಲವೊಂದನ್ನು ಬೇಧಿಸಲಾಗಿದೆ ಎಂದು ಡಿಆರ್‌ಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಗಸ್ಟ್ 3 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಕಾರ್ಯಪ್ರವೃತ್ತರಾದ ನಗರದ ಡಿಆರ್‌ಐ ಅಧಿಕಾರಿಗಳು ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಖಾಸಗಿ ವಿಮಾನಯಾನ ಸಂಸ್ಥೆಯೊಂದರ ವಿಮಾನದಲ್ಲಿ ಮುಂಬೈ ಮೂಲಕ ಸಿಂಗಾಪುರಕ್ಕೆ ತೆರಳುತ್ತಿದ್ದ ಶಂಕಿತರ ಸಾಮಾನು ಸರಂಜಾಮುಗಳನ್ನು ಪರಿಶೀಲಿಸಿದಾಗ 6,626 (ಒಣಗಿದ) ಸಮುದ್ರಕುದುರೆಗಳು ಪತ್ತೆಯಾಗಿವೆ. ಇದು ಇತ್ತೀಚಿನ ದಿನಗಳಲ್ಲಿ ಅತಿ ದೊಡ್ಡ ಕಳ್ಳ ಸಾಗಣೆಯಾಗಿದ್ದು, ಮೂವರು ಪ್ರಯಾಣಿಕರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇವರೆಲ್ಲರೂ ತಮಿಳುನಾಡಿನವರು ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾರತದಲ್ಲಿ ವನ್ಯಜೀವಿ (ಸಂರಕ್ಷಣೆ) ಕಾಯ್ದೆಯಡಿ ಎಲ್ಲಾ ಜಾತಿಯ ಸಮುದ್ರ ಕುದುರೆಗಳ ಮಾರಾಟ, ಖರೀದಿ ಮತ್ತು ಯಾವುದೇ ರೀತಿಯ ಬಳಕೆಯನ್ನು ನಿಷೇಧಿಸಲಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ. ಆಗಸ್ಟ್ 4 ರಂದು ಕಾರ್ಯಾಚರಣೆಯ ನಂತರ ಕಳ್ಳಸಾಗಣೆ ಕಾರ್ಯಾಚರಣೆಯ ಪ್ರಮುಖ ವ್ಯಕ್ತಿಯನ್ನು ಬಂಧಿಸಲಾಯಿತು. ಬಂಧಿತ ಸಿಂಗಾಪುರಕ್ಕೆ ಸಮುದ್ರಕುದುರೆಗಳ ಸಾಗಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಡಿಆರ್ ಐ ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಒಣಗಿದ ಸಮುದ್ರ ಕುದುರೆಗಳಿಗೆ ಬೇಡಿಕೆ ಹೆಚ್ಚಿದೆ. ಅಲ್ಲಿ ಸಾಂಪ್ರದಾಯಿಕ ಔಷಧ, ಪಾಕಶಾಲೆ,ಅಕ್ವೇರಿಯಂಗಳಿಗೆ ಅಲಂಕಾರಿಕಾ ಮತ್ತಿತರ ಕಾರಣಕ್ಕೆ ಒಣಗಿದ ಸಮುದ್ರ ಕುದುರೆಗಳನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದರು.
Advertisement