
ಬೆಂಗಳೂರು: ಅಯೋಧ್ಯಾ ಪ್ರಕಾಶನ ಪ್ರಕಟಿಸಿ ಧಾರವಾಡ ಜಿಲ್ಲೆಯ ಹಲವೆಡೆ ಬಿಡುಗಡೆ ಆಗುತ್ತಿರುವ ‘ವಚನ ದರ್ಶನ’ ಪುಸ್ತಕಕ್ಕೆ ಲಿಂಗಾಯತ ಮಹಾಸಭಾ ಹಾಗೂ ಪ್ರಗತಿಪರ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ಧಾರವಾಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರು, ಪುಸ್ತಕ ಬಿಡುಗಡೆ ಮಾಡಲು ಪ್ರಕಾಶಕರಿಗೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಪುಸ್ತಕಕ್ಕೆ ಬೆಂಬಲ ವ್ಯಕ್ತಪಡಿಸಿರುವ ಮಠಾಧೀಶರು ಮತ್ತು ಲಿಂಗಾಯತ ಮುಖಂಡರಿಗೆ ಹಲವು ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ.
ನೀವು ನಿಜವಾಗಿಯೂ ಬಸವಣ್ಣನವರ ಬೋಧನೆಗಳು ಮತ್ತು ಅವರ ಪರಿಕಲ್ಪನೆಗಳನ್ನು ಅನುಸರಿಸುತ್ತೀರಾ? ಸಮಾಜ ಸುಧಾರಕ ಬಸವಣ್ಣ ಲಿಂಗಾಯತ ಧರ್ಮದಲ್ಲಿ ವೇದ, ಉಪನಿಷತ್ತು, ಆಗಮ ಮತ್ತು ಜಾತಿ ಪದ್ಧತಿಯ ಪ್ರಾಧಾನ್ಯತೆಯನ್ನು ಒಪ್ಪಿಕೊಂಡಿದ್ದರೇ? ಬಸವಣ್ಣನವರು ಹಿಂದಿನ ಅನುರೂಪವಾದಿ ಹಿಂದೂಗಳಾಗಿದ್ದರು ಮತ್ತು ಸಮಾಜ ಸುಧಾರಕರಲ್ಲ: ನಿಮ್ಮ ಅಭಿಪ್ರಾಯವೇನು? ಬಸವಣ್ಣನವರ ಬೋಧನೆಗಳನ್ನು ತಿರುಚಿದ ಈ ಪುಸ್ತಕದ ಹಿಂದಿರುವ ವ್ಯಕ್ತಿಗಳು ಯಾರು? ಬಸವಣ್ಣನವರ ಬೋಧನೆಗಳನ್ನು ಏಕೆ ವಿರೂಪಗೊಳಿಸಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಮೂರೂಸಾವಿರ ಮಠದ ಮಠಾಧೀಶ ಗುರು ಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ನಮ್ಮ ವಾದವನ್ನು ಒಪ್ಪಿಕೊಂಡು ಹುಬ್ಬಳ್ಳಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹಲವೆಡ ಪುಸ್ತಕ ಬಿಡುಗಡೆಗೆ ಯೋಜನೆ ರೂಪಿಸುತ್ತಿದ್ದಾರೆ. ಆದರೆ, ಇದರ ವಿರುದ್ಧ ಮೌನ ಪ್ರತಿಭಟನೆ ನಡೆಸುತ್ತೇವೆ. ಬಸವಣ್ಣ ಅವರು ಹೇಳಿದನ್ನು ತಿರುಚಲು ನಾವು ಬಿಡುವುದಿಲ್ಲ ಎಂದು ಧಾರವಾಡದ ಲಿಂಗಾಯತ ಕಾರ್ಯಕರ್ತ ಕುಮಾರಣ್ಣ ಪಾಟೀಲ್ ಹೇಳಿದ್ದಾರೆ.
ಪುಸ್ತಕ ಬಿಡುಗಡೆ ವಿರೋಧಿಸಿ ಶನಿವಾರ ಕಲಬುರಗಿಯಲ್ಲಿ ಪ್ರತಿಭಟನೆ ನಡೆದಿತ್ತು. 50 ಲಿಂಗಾಯತ ಪ್ರತಿಭಟನಾಕಾರರ ಗುಂಪು ಪುಸ್ತಕದ ವಿರುದಅಧ ಘೋಷಣೆಗಳನ್ನು ಕೂಗಿತ್ತು, ಪುಸ್ತಕವು ಬಸವಣ್ಣನ ನಿಜವಾದ ಚಿತ್ರಣವನ್ನು ಪ್ರಸ್ತುತಪಡಿಸುವುದಿಲ್ಲ ಮತ್ತು ಅದನ್ನು ಲಿಂಗಾಯತರು ಏಕೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಗದಗದ ಶಿವಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಈ ನಡುವೆ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ನಟ ಚೇತನ್ ಅವರು, ವಚನ ದರ್ಶನ (ಅಯೋಧ್ಯೆ ಪಬ್ಲಿಕೇಷನ್ಸ್) ಪುಸ್ತಕದ ಮೇಲಿನ ಬಿರುಗಾಳಿ ಬಸವಣ್ಣ ಅವರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಪ್ರಯತ್ನಿಸುತ್ತಿರುವವರು ಮತ್ತು ಆಡಳಿತಾರೂಢ ಪ್ರಗತಿಪರ ಚಿಂತಕರುಗಳ ನಡುವಿನ ಬೈನರಿ ಸೈದ್ಧಾಂತಿಕ ಹೋರಾಟವಾಗಿದೆ. ಸಮಾನತಾವಾದಿಗಳಾದ ನಾವು ಮಾತ್ರ ಬಸವಣ್ಣನವರ ನಿಜವಾದ ಸೈದ್ಧಾಂತಿಕ ಉತ್ತರಾಧಿಕಾರಿಗಳಾಗಿದ್ದೇವೆ. 21ನೇ ಶತಮಾನದ ಬಸವಣ್ಣನ ವ್ಯಾಖ್ಯಾನಗಳು ಎಲ್ಲಾ ಕಡೆಗಳಿಂದಲೂ ಚಿಗುರೊಡೆಯಲಿ ಎಂದು ಹೇಳಿದ್ದಾರೆ.
Advertisement