ನಮಗೆ ತಂಗಳು ಇರ್ತಿತ್ತು, ಇಡ್ಲಿ ದೋಸೆ ಇರ್ತಿಲಿಲ್ಲ. ನಾನು ರಾಚಯ್ಯನವರ ಪ್ರಾಡಕ್ಟ್- ಸಿದ್ದರಾಮಯ್ಯ

'ನಮಗೆ ಮನೆಯಲ್ಲಿ ತಂಗಳು ಇರ್ತಿತ್ತೇ ಹೊರತು, ಇಡ್ಲಿ, ದೋಸೆ, ಉಪ್ಪಿಟ್ಟು ಏನೂ ಇರ್ತಾ ಇರ್ಲಿಲ್ಲ. ರಾತ್ರಿ ಉಳಿದ ಮುದ್ದೆಗೆ ಮಜ್ಜಿಗೆ ಬೆರೆಸಿ ತಂಗಳು ತಿಂತಾ ಇದ್ವಿ'
ಸಿದ್ದರಾಮಯ್ಯ ಮತ್ತಿತರರು
ಸಿದ್ದರಾಮಯ್ಯ ಮತ್ತಿತರರು
Updated on

ಚಾಮರಾಜನಗರ: ರಾಚಯ್ಯ ಅವರ ಮಾರ್ಗದರ್ಶನದಂತೆ ಶೋಷಿತರ ಪರವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಆಲೂರಿನಲ್ಲಿ ನಿರ್ಮಿಸಲಾಗಿರುವ ಮಾಜಿ ರಾಜ್ಯಪಾಲ ದಿವಂಗತ ಬಿ.ರಾಚಯ್ಯ ಅವರ ಸ್ಮಾರಕ ಉದ್ಘಾಟಿಸಿ ಮಾತನಾಡಿದ ಅವರು, ರಾಚಯ್ಯ ಅವರು ರಾಜ್ಯ ರಾಜಕಾರಣದ ಅತ್ಯಂತ ಮುತ್ಸದ್ದಿ ರಾಜಕಾರಣಿ. ಹೆಚ್ಚು ಮಾತಾಡುತ್ತಿರಲಿಲ್ಲ. ಬಡವರ ಪರವಾಗಿ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದರು.ರಾಮಕೃಷ್ಣ ಹೆಗಡೆ ಅವರ ಮಂತ್ರಿ ಮಂಡಲದಲ್ಲಿ ಪ್ರಭಾವಿ ಆಗಿದ್ದ ರಾಚಯ್ಯನವರಿಗೆ, ಪ್ರತಿಭಾವಂತ, ಜನಪರ ಕಾಳಜಿಯುಳ್ಳ ರಾಜಕಾರಣಿಗಳನ್ನು ಹತ್ತಿರಕ್ಕೆ ಕರೆದು ಬೆಳೆಸುವ ಗುಣ ಇತ್ತು. ಹೆಗಡೆ ಮತ್ತು ರಾಚಯ್ಯ ಅವರು ನನ್ನನ್ನು ಕರೆದು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಬಳಿಕ ನನ್ನನ್ನು ಮಂತ್ರಿ ಮಾಡಿದ್ದರು ಎಂದು ಇತಿಹಾಸ ಸ್ಮರಿಸಿಕೊಂಡರು.

ಅವತ್ತು ನಾನು ಮಂತ್ರಿ ಆಗದೇ ಹೋಗಿದ್ದರೆ ನಾನು ಇವತ್ತು ಎರಡನೇ ಬಾರಿ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಇದೇ ಕೆಲವರಿಗೆ ಹೊಟ್ಟೆಯುರಿ ಎಂದು ತಮ್ಮ ಮೇಲೆ ಆರೋಪಿಸಿರುವವರಿಗೆ ಟೀಕಿಸಿದರು. ಮೈಸೂರು, ಚಾಮರಾಜನಗರ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಮುಖಂಡರು ರಾಚಯ್ಯನವರ ಪ್ರಾಡಕ್ಟ್ ಗಳು. ನಾನೂ ರಾಚಯ್ಯನವರ ಪ್ರಾಡಕ್ಟು. ರಾಚಯ್ಯ ಅವರು ಸಂವಿಧಾನ ಮಾರ್ಗದಲ್ಲಿ ನಡೆದರು. ಇವರು ಇವತ್ತಿನ ಯುವ ಪೀಳಿಗೆಗೂ ಮಾದರಿ ಎಂದರು.

ರಾಚಯ್ಯ ಸ್ಮಾರಕದಲ್ಲಿ IAS-IPS ತರಬೇತಿ ಕೇಂದ್ರ ಸ್ಥಾಪಿಸಲು ಸರ್ಕಾರದ ನೆರವನ್ನು ಶಾಸಕ ಕೃಷ್ಣಮೂರ್ತಿ ಅವರು ಕೇಳಿದ್ದಾರೆ. ಈ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಮತ್ತಿತರರು
ಮಧ್ಯಂತರ ಚುನಾವಣೆ ಗುಮ್ಮ? (ಸುದ್ದಿ ವಿಶ್ಲೇಷಣೆ)

ನಮಗೆ ತಂಗಳು ಇರ್ತಿತ್ತು. ಇಡ್ಲಿ, ದೋಸೆ ಇರ್ತಿಲಿಲ್ಲ: ನಮಗೆ ಮನೆಯಲ್ಲಿ ತಂಗಳು ಇರ್ತಿತ್ತೇ ಹೊರತು, ಇಡ್ಲಿ, ದೋಸೆ, ಉಪ್ಪಿಟ್ಟು ಏನೂ ಇರ್ತಾ ಇರ್ಲಿಲ್ಲ. ರಾತ್ರಿ ಉಳಿದ ಮುದ್ದೆಗೆ ಮಜ್ಜಿಗೆ ಬೆರೆಸಿ ತಂಗಳು ತಿಂತಾ ಇದ್ವಿ ಎಂದು ತಮ್ಮ ಆ ದಿನಗಳನ್ನು ಮುಖ್ಯಮಂತ್ರಿ ಸ್ಮರಿಸಿದರು. ರಾಚಯ್ಯ ಅವರ ಸ್ಮಾರಕ‌ ಉದ್ಘಾಟನಾ ಭಾಷಣ ಶುರು ಮಾಡುವ ವೇಳೆಗೆ ಸಂಜೆ 4 ಗಂಟೆ ಆಗಿತ್ತು. ಊಟದ ಸಮಯ ತಡವಾದದ್ದನ್ನು ಪ್ರಸ್ತಾಪಿಸಿ ಕ್ಷಮೆ ಕೋರಿ ಭಾಷಣ ಆರಂಭಿಸಿದ ಮುಖ್ಯಮಂತ್ರಿಗಳು ಮೇಲಿನ‌ ಪ್ರಸಂಗ ನೆನಪಿಸಿಕೊಂಡರು. ರಾಚಯ್ಯ ಅವರ ಮನೆಯಲ್ಲೂ ಇಡ್ಲಿ ದೋಸೆ ಇರ್ತಿಲಿಲ್ಲ ಅಂತ ಕಾಣ್ತದೆ. ಅವರೂ ನನ್ನಂಗೆ ತಂಗಳು ತಿಂದು ಗಟ್ಟಿಯಾದರು ಎಂದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com