ಬೆಂಗಳೂರು: ಕಾರ್ಪೋರೇಟ್ ಕಂಪನಿಗಳು ಆರೋಗ್ಯ ಕ್ಷೇತ್ರಕ್ಕೆ ಸಿಎಸ್‍ಆರ್ ಹಣವನ್ನು ಹೆಚ್ಚು ಬಳಕೆ ಮಾಡಲು ಆದ್ಯತೆ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಹೇಳಿದರು.
ಸಿ-ಕ್ಯಾಂಪ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಪೋರೇಟ್ ಕಂಪೆನಿಗಳ ಫೌಂಡೆಶನ್ಸ್ ರೌಂಡ್ ಟೇಬಲ್ ಸಭೆಯಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಕಾರ್ಪೋರೇಟ್ ಕಂಪನಿಗಳು ಆರೋಗ್ಯ ಕ್ಷೇತ್ರಕ್ಕೆ ಸಿಎಸ್‍ಆರ್ ಹಣವನ್ನು ಹೆಚ್ಚು ಬಳಕೆ ಮಾಡಲು ಆದ್ಯತೆ ನೀಡಬೇಕು ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ಹಲವು ಸುಧಾರಣೆ ತರಬಹುದು. ಈ ನಿಟ್ಟಿನಲ್ಲಿ ಸರಕಾರ ಹಾಗೂ ಆರೋಗ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಹೇಳಿದರು.
ಇದೇ ವೇಳೆ ಆರಂಭಿಕ ರೋಗ ಪತ್ತೆಗೆ ಒತ್ತು ನೀಡುವ ಉಪಕ್ರಮಗಳು ಸೇರಿದಂತೆ ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸಲು ಇಲಾಖೆ ನಡೆಸುತ್ತಿರುವ ಕಾರ್ಯಕ್ರಮ ಹಾಗೂ ಕ್ರಮಗಳನ್ನು ಸಚಿವರು ಎತ್ತಿ ತೋರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆಯನ್ನು ಒದಗಿಸಲು ‘ಗೃಹ ಆರೋಗ್ಯ’ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಯೋಜನೆಗೆ ಸಿಎಸ್‌ಆರ್ ಮೂಲಕ ಕೊಡುಗೆ ನೀಡಲು ಕಾರ್ಪೊರೇಟ್ ಕಂಪನಿಗಳಿಗೆ ಆಹ್ವಾನ ನೀಡಿದರು.
ಕೆಎಫ್‍ಡಿಯಂತಂಹ ರೋಗಗಳಿಗೆ ಇಂದು ವ್ಯಾಕ್ಸಿನ್ ತಯಾರಿಸುವ ಅಗತ್ಯತೆ ಇದೆ. ಕರ್ನಾಟಕದಲ್ಲಿ ಮಂಗನ ಕಾಯಿಲೆ ಹಾವಳಿ ಮೂರು ನಾಲ್ಕು ಜಿಲ್ಲೆಗಳಲ್ಲಿದೆ. ಕಾಯಿಲೆಗೆ ವ್ಯಾಕ್ಸಿನ್ ತಯಾರಿಸಬಹುದಾಗಿದ್ದು, ಸಂಶೋಧನಾ ಕಾರ್ಯಕ್ಕೆ ಸಿಎಸ್‍ಆರ್ ಹಣವನ್ನು ವಿನಿಯೋಗವಾಗಬೇಕು ಎಂದು ಹೇಳಿದರು.
Advertisement