
ಬೆಂಗಳೂರು: ಚಿನ್ನಾಭರಣ ಪ್ರಕರಣವೊಂದರಲ್ಲಿ ಪೊಲೀಸರ ಕೈಯ್ಯಿಂದ ನಾಜೂಕಾಗಿ ತಪ್ಪಿಸಿಕೊಂಡಿದ್ದ ಮಹಿಳೆಯೊಬ್ಬಳು ತಾನು ಮಾಡಿದ್ದ ಒಂದು ತಪ್ಪಿನಿಂದಾಗಿ ಈಗ ಸಿಕ್ಕಿಹಾಕಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಚಿನ್ನಾಭರಣ ದೋಚಿದ್ದ ಮನೆ ಕೆಲಸದಾಕೆ ಕದ್ದ ನೆಕ್ಲೇಸ್ ಧರಿಸಿ ವಾಟ್ಸಾಪ್ ಡಿಪಿ ಹಾಕಿಕೊಂಡಿದ್ದಳು. ಇದನ್ನು ಕಂಡುಹಿಡಿದ ಎಚ್‌ಎಎಲ್ ಪೊಲೀಸರು ತಕ್ಷಣವೇ ಆಕೆಯನ್ನು ಬಂಧಿಸಿ ಬಾಯಿಬಿಡಿಸಿದ್ದಾರೆ. ಮುನ್ನೇಕೊಳಾಲು ನಿವಾಸಿ ರೇಣುಕಾ ಬಂಧಿತ ಆರೋಪಿ. ಹಗರಿಬೊಮ್ಮನಹಳ್ಳಿ ಮೂಲದವಳು.
ಆರೋಪಿಯು ಮಾರತ್ತಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಟೆಕ್ಕಿ ದಂಪತಿಯ ಫ್ಲಾಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಮೇರಾದಲ್ಲಿ ಇರಿಸಲಾಗಿದ್ದ ಆಭರಣಗಳು ನಾಪತ್ತೆಯಾಗಿರುವುದನ್ನು ಕಂಡು ಮಾಲೀಕರು ದೂರು ದಾಖಲಿಸಿದ್ದಾರೆ. ಆದರೆ ಎಲ್ಲಾ ನಾಲ್ವರು ಶಂಕಿತರ ವಿಚಾರಣೆ ನಡೆಸಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅದೇ ಅಪಾರ್ಟ್ ಮೆಂಟ್ ನ ಮತ್ತೊಂದು ಮನೆಯಲ್ಲಿಯೂ ಕಳ್ಳತನವಾಗಿತ್ತು. ಮನೆ ಮಾಲೀಕರು ರೇಣುಕಾ ಮೇಲೆ ಅನುಮಾನ ವ್ಯಕ್ತ ಪಡಿಸಿದ್ದರು. ಪೊಲೀಸರು ಸಹ ರೇಣುಕಾಳನ್ನು ಕರೆಸಿ ವಿಚಾರಿಸಿದಾಗ ಆಕೆ ತಾನು ಕದ್ದಿಲ್ಲ ಎಂದು ವಾದಿಸಿದಳು. ಕೊನೆಗೆ ಆಕೆಯನ್ನು ಪೊಲೀಸರು ಬಿಟ್ಟು ಕಳಿಸಿದ್ದರು.
ಆಕೆಯ ವಿರುದ್ಧ ದೂರು ದಾಖಲಾದ ನಂತರ, ಮಹಿಳೆ ಕೆಲಸ ತೊರೆದು ವಿವಿಧ ಸ್ಥಳಗಳಲ್ಲಿ ಮನೆಗೆಲಸದ ಸೇವಕಿಯಾಗಿ ಕೆಲಸ ಮಾಡುತ್ತಿದ್ದಳು.ಆಕೆಯನ್ನು ಆರೊಪಿ ಎಂದು ಸಿಕ್ಕಿಸಲು ಯಾವುದೇ ಸಾಕ್ಷಿ ಇರಲಿಲ್ಲ, ಮೇಲಾಗಿ, ದೂರುದಾರರು ನವೆಂಬರ್ 2023 ರಲ್ಲಿ ಅಲ್ಮೇರಾದಲ್ಲಿ ಚಿನ್ನಾಭರಣಗಳನ್ನು ಇಟ್ಟುಕೊಂಡು ನಾಲ್ಕು ತಿಂಗಳ ನಂತರ ಪರಿಶೀಲಿಸಿದ್ದರು.
ಕಳೆದ ಮೂರ್ನಾಲ್ಕು ತಿಂಗಳಿಂದಲೂ ರೇಣುಕಾ ತಾನ ಕಳವಿನ ಗುಟ್ಟು ಸಿಗದಂತೆ ಬಾರೀ ಜಾಗ್ರತೆ ವಹಿಸಿದ್ದಳು. ಜುಲೈ 30 ರಂದು ಕದ್ದ ಆಭರಣ ಧರಿಸಿ ಫೋಟೋ ತೆಗೆದುಕೊಂಡು ವಾಟ್ಸಾಪ್ ನಲ್ಲಿ ಡಿಪಿ ಹಾಕಿಕೊಂಡಿದ್ದಳು. ನಂತರ ಆಕೆಯನ್ನು ಕರೆಸಿ ವಿಚಾರಿಸಿದಾಗ ಕಳ್ಳತನದ ಬಗ್ಗೆ ಒಪ್ಪಿಕೊಂಡಿದ್ದಾಳೆ. ಎರಡೂ ಫ್ಲಾಟ್‌ಗಳಲ್ಲಿ ಕಳ್ಳತನವಾಗಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 80 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಕೆಯ ಪತಿ ನಾಗರಾಜ್ ಕ್ಯಾಬ್ ಚಾಲಕನಾಗಿದ್ದು, ಕಳ್ಳತನದಲ್ಲಿ ಆತನ ಯಾವುದೇ ಪಾತ್ರವಿಲ್ಲ. ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Advertisement